ಜಿಲ್ಲೆ

ಎಸ್ಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಂ.1 ಸ್ಥಾನದ ಹಂಬಲ

Chitradurga

ಚಿತ್ರದುರ್ಗ: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ನಂ.ಒನ್ ಗುರಿ ತಲುಪಲು, ಶಿಕ್ಷಣ ಇಲಾಖೆ ಹಲವು ಪ್ರಯತ್ನಗಳನ್ನು ನಡೆಸಿದ್ದು, ಈ ಮೂಲಕ ಉತ್ತಮ ಕೊಯ್ಲು ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಜ್ಜೆ ಇಟ್ಟಿದ್ದಾರೆ.

ಮಾರ್ಚ್ 31ರಿಂದ ಏಪ್ರಿಲ್ 15ವರೆಗೆ ಪರೀಕ್ಷೆ ನಡೆಯಲಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 23,115 ಸಾವಿರ ಮಂದಿ ಪರೀಕ್ಷೆಯನ್ನು ಎದುರಿಸಿದ್ದು, ಚಿತ್ರದುರ್ಗ ಜಿಲ್ಲೆ, ಫಲಿತಾಂಶ ದಲ್ಲಿ ರಾಜ್ಯದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು. ಇದನ್ನು ನಂ. 1 ಸ್ಥಾನಕ್ಕೆ ತರಬೇಕೆಂಬ ಸದಾಶಯ ಇಲಾಖೆ ಅಧಿಕಾರಿ, ಶಿಕ್ಷಕ ವರ್ಗದಲ್ಲಿದೆ. ಜಿಲ್ಲೆಯಲ್ಲಿ ಈ ಬಾರಿ 23,428 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇದಕ್ಕಾಗಿ ಕಳೆದ ಜೂನ್‌ನಿಂದಲೇ ತಯಾರಿ ಆರಂಭವಾಗಿದೆ. ತಾಲೂಕು ಮಟ್ಟದಲ್ಲಿ ಪ್ರೌಢಶಾಲಾ ಮುಖ್ಯಸ್ಥರ ಸಭೆಗಳೊಂದಿಗೆ, ಫಲಿತಾಂಶಕ್ಕೆ ಸಂಬಂಧಿಸಿದ ಹಲವು ಪರಿಶೀಲನೆಗಳನ್ನು ನಡೆಸಲಾಗಿದೆ.

ನೆಂಟರ ಶಾಲೆ:

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಸಮೀಪದ ಮತ್ತೊಂದು ಶಾಲೆಗೆ ಒಂದು ದಿನ ತೆರಳಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ತಮ್ಮ ಶಾಲೆಯಲ್ಲಿ ಸಮಸ್ಯೆ ಇದೆ ಅನ್ನಿಸಿದರೆ ಅದನ್ನು ಶಿಕ್ಷಕರು, ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ.

ಸಂವಾದ: ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಇರಬಾರದೆಂಬ ಕಾರಣಕ್ಕೆ, ಒಂದು ಪರೀಕ್ಷಾ ಕೇಂದ್ರದಲ್ಲಿ ಐದಾರು ಶಾಲೆಗಳ ವಿದ್ಯಾರ್ಥಿಗಳ ಸಂವಾದ ಕಾರ‌್ಯಕ್ರಮ ಏರ್ಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ 98 ಪರೀಕ್ಷಾ ಕೇಂದ್ರಗಳಿವೆ. ಮುಖ್ಯ ಪರೀಕ್ಷೆ ಮುನ್ನವೇ ಜನವರಿಯಿಂದ ನಿಗದಿತ ಅವಧಿಯಲ್ಲಿ 25 ಹಾಗೂ 20 ಅಂಕಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ವಿಶ್ಲೇಷಿಸಿ, ಹೆಚ್ಚಿಸುವ ಪ್ರಯತ್ನ ನಡೆದಿದೆ.

ರಾತ್ರಿ ಶಾಲೆ:

ಕಲಿಕೆಯಲ್ಲಿ ಹಿಂದುಳಿದವರಿಗೆ ಹೆಚ್ಚಿನ ಅಭ್ಯಾಸಕ್ಕಾಗಿ ರಾತ್ರಿ ಶಾಲೆಗಳನ್ನು ಮಾಡಲಾಗುತ್ತಿದೆ. ಪರೀಕ್ಷಾ ಫಲಿತಾಂಶ ಕಡಿಮೆ ಇರುವ ಪ್ರೌಢಶಾಲೆಗಳಿಗೆ ಅಧಿಕಾರಿ-ಶಿಕ್ಷಕರ ತಂಡವನ್ನು ಕಳುಹಿಸಲಾಗುತ್ತಿದೆ. ಫಲಿತಾಂಶ ಸುಧಾರಣೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಇಲಾಖೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಭ್ಯಾಸ ಪುಸ್ತಕಗಳನ್ನು ರಚಿಸಿ, ಸಾಫ್ಟ್ ಕಾಫಿಯನ್ನು ಆಯಾ ಶಾಲೆಗಳನ್ನು ಕಳಿಸಿದೆ.

ವಿಷಯ-ಅಭ್ಯಾಸ ಪುಸ್ತಕದ ಹೆಸರು

ಕನ್ನಡ-ಶಾಲಿವನ

ಗಣಿತ-ಜ್ಞಾನಾಮೃತ

ಇಂಗ್ಲಿಷ್-ದಿ ಎಟ್ರನಲ್ ನಾಲೆಡ್ಜ್

ವಿಜ್ಞಾನ-ಅಮೃತ ಅನ್ವಯ,ಗ್ಲೂಕೋಸ್ ಹಾಗೂ ಸ್ನೇಹಕ

ಸಮಾಜ ವಿಜ್ಞಾನ-ಸವಿಚೇತನ

ಹಿಂದಿ-ಹಿಮಾದ್ರಿ

ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳ ತಾಲೂಕು ವಿವರ

ತಾಲೂಕು-ವಿದ್ಯಾರ್ಥಿಗಳ ಸಂಖ್ಯೆ-ಪರೀಕ್ಷಾ ಕೇಂದ್ರಗಳು

ಚಳ್ಳಕೆರೆ-4959-21

ಚಿತ್ರದುರ್ಗ-6356-29

ಹಿರಿಯೂರು-3781-16

ಹೊಳಲ್ಕೆರೆ-2861-12

ಹೊಸದುರ್ಗ-3287-12

ಮೊಳಕಾಲ್ಮೂರು-2184-8

ಶಾಲೆಗಳು, ಪರೀಕ್ಷೆಗೆ ನೋಂದಾಯಿತ ಶಾಲೆಗಳ ಸಂಖ್ಯೆ

ಸರ್ಕಾರಿ-114

ಅನುದಾನಿತ-202

ಅನುದಾನ ರಹಿತ-116

ಇತರೆ ಇಲಾಖೆ ಶಾಲೆಗಳು- 43

*ಕೋಟ್

ಪಾಸಿಂಗ್, ಸ್ಕೋರಿಂಗ್ ಪ್ಯಾಕೇಜ್ ಹಾಗೂ ಎಲ್ಲ ವಿದ್ಯಾರ್ಥಿಗಳು ಅನ್ವಯಿಸುವಂಥ ಅಭ್ಯಾಸ ಪುಸಕ್ತಗಳನ್ನು ಸಿದ್ಧಪಡಿಸಿ ಶಾಲೆಗಳಿಗೆ ವಿತರಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದವರನ್ನು ಗುರುತಿಸಿ ಅವರ ಶೈಕ್ಷಣಿಕ ಸಾಮರ್ಥ್ಯ ಅಭಿವೃದ್ಧಿ, ಉತ್ತೀರ್ಣಕ್ಕೆ ಅಗತ್ಯವಿರುವ ಬೋಧನಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಫಲಿತಾಂಶದಲ್ಲಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಬೇಕೆಂಬ ಗುರಿ ನಮ್ಮ ಮುಂದಿದೆ. ಇದಕ್ಕಾಗಿ ಹಲವು ಪ್ರಯತ್ನಗಳಿಗೆ ಚಾಲನೆ ನೀಡಲಾಗಿದೆ.

ಕೆ.ರವಿಶಂಕರ ರೆಡ್ಡಿ, ಡಿಡಿಪಿಐ, ಚಿತ್ರದುರ್ಗ