ಜಿಲ್ಲೆ

ರಸ್ತೆ ಪೂರ್ಣಗೊಳ್ಳುವ ಮೊದಲೇ ಕಿತ್ತುಬಂದ ಡಾಂಬರು

ಪ್ರಸಿನ್ ಕೆ.ಆರ್

ಗುಂಡ್ಲುಪೇಟೆ: ತಾಲೂಕಿನ ಅಂಕಹಳ್ಳಿ-ಬಾಚಹಳ್ಳಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಡಾಂಬರು ಕಿತ್ತುಬರುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಯ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕಾಡಂಚಿನ ಗ್ರಾಮವಾದ ಬಾಚಹಳ್ಳಿ ರಸ್ತೆ ತುಂಬಾ ವರ್ಷಗಳಿಂದ ಹಾಳಾಗಿತ್ತು. ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯು ಅಂಕಹಳ್ಳಿಯಿಂದ ಬಾಚಹಳ್ಳಿವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಆರು ತಿಂಗಳಿನಿಂದಲೂ ಮಂದಗತಿಯಲ್ಲಿ ಸಾಗುತ್ತಿದ್ದ ರಸ್ತೆ ಕಾಮಗಾರಿ ಸದ್ಯ ಮುಕ್ತಾಯದ ಹಂತಕ್ಕೆ ಬಂದಿದೆ.

ಇತ್ತೀಚೆಗೆ ಅಂಕಹಳ್ಳಿಯಿಂದ ಬಾಚಹಳ್ಳಿವರೆಗೂ ರಸ್ತೆಗೆ ಡಾಂಬರು ಹಾಕಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ವಾಹನಗಳ ಓಡಾಟದಿಂದ ಡಾಂಬರು ಕಿತ್ತುಬಂದಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದು ಪ್ರತಿದಿನವೂ ನೂರಾರು ವಾಹಗಳು ಸಂಚರಿಸುವ ರಸ್ತೆಯನ್ನು ಗುಣಮಟ್ಟದಲ್ಲಿ ನಿರ್ಮಿಸಬೇಕು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.