ಹರಿಹರ: ಗುಡ್ ಟಚ್, ಬ್ಯಾಡ್ ಟಚ್ ಕುರಿತು ಮಕ್ಕಳಿಗೆ ಪಾಲಕರು ಹಾಗೂ ಶಿಕ್ಷಕರು ಜಾಗೃತಿ ಮೂಡಿಸಬೇಕು ಎಂದು ಎಎಸ್ಪಿ ವಿಜಯ್ಕುಮಾರ್ ಎಂ. ಸಂತೋಷ್ ಹೇಳಿದರು.
ನಗರದ ಸಂತ ಅಲೋಶಿಯಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶನಿವಾರ 2024-25ನೇ ಸಾಲಿನ ಶಿಶುವಿಹಾರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿತರು ಬಹುತೇಕ ಸಂಬಂಧಿಗಳು ಅಥವಾ ಪರಿಚಯಸ್ಥರೆ ಇರುತ್ತಾರೆ. ದುರ್ಭಾವನೆಯ ಸ್ಪರ್ಶವಾದಾಗ ಅದನ್ನು ಪ್ರತಿರೋಧಿಸುವುದನ್ನು ಮಕ್ಕಳಿಗೆ ಕಲಿಸುವ ಅಗತ್ಯವಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಟಿ.ಇನಾಯತ್ ಉಲ್ಲಾ ಮಾತನಾಡಿ, ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆತರೆ ಮಕ್ಕಳು ಶೈಕ್ಷಣಿಕವಾಗಿ ಪ್ರಬಲರಾಗಿ ಬೆಳೆಯುತ್ತಾರೆ. ಮನೆಯಲ್ಲಿ ಪಾಲಕರು ಕೂಡ ಮಕ್ಕಳು ಶಾಲೆಯಲ್ಲಿ ಕಲಿತು ಬಂದದ್ದನ್ನು ಪುನರ್ ಮನನ ಮಾಡಿಸಬೇಕು ಎಂದು ತಿಳಿಸಿದರು.
ಸಂಸ್ಥೆ ನಿರ್ದೇಶಕ ಫಾ.ಎರಿಕ್ ಮಥಾಯಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರಿಂದ ಪಡೆದ ಶುಲ್ಕವನ್ನು ಶಾಲಾಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಬಳಕೆ ಮಾಡಲಾಗುತ್ತಿದೆ ಎಂದರು.
ನಂತರ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಚಟುವಟಿಕೆಗಳು ಜನಮನ ಸೆಳೆದವು. ಸಾಧಕ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.
ಪ್ರಾಚಾರ್ಯು ಸಿಸ್ಟರ್ ಶಾಂತಿ ಡೇವಿಡ್, ಪುಷ್ಪಲತಾ ಅರಸ್ ಹಾಗೂ ಉಪ ಪ್ರಾಚಾರ್ಯ ಫಾ. ಎ.ಜೆ. ವಿನೋದ್, ಸಂಸ್ಥೆ ಆಡಳಿತಾಧಿಕಾರಿ ಫಾದರ್ ಜಾನ್ ಬ್ಯಾಪ್ಟಿಸ್ಟ್, ಶಿಕ್ಷಕರಾದ ಅಬ್ದುಲ್ ರೆಹಮಾನ್, ಮೌಸಿನ್ ಉಲ್ಲಾ, ಎಲ್.ಎಸ್. ಮಂಜುನಾಥ್ ಇದ್ದರು.