ಜಿಲ್ಲೆ

ಎರಡುವರೆ ವರ್ಷಗಳ ಹಿಂದೆ ಸಂಭವಿಸಿದ್ದ ಅಪಘಾತ: ಗಾಯಾಳು ಎಎಸೈ ಮೃತ್ಯು

Dakshina Kannada

ಮಂಗಳೂರು: ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ನಗರ ಸಂಚಾರ ಪಶ್ಚಿಮ ಠಾಣಾ ಎಎಸ್‌ಐ ಮೂಲತಃ ಬಂಟ್ವಾಳ ತಾಲೂಕು ವಿಟ್ಲ ಕೇಪು ನೀರ್ಕಜೆ ನಿವಾಸಿ ನಾರಾಯಣ ನಾಯ್ಕ ಬಿ. (59)ಭಾನುವಾರ ಮೃತಪಟ್ಟಿದ್ದಾರೆ.

ಹೈವೇ ಪೆಟ್ರೋಲಿಂಗ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅವರು 2018ರ ಅ.10ರ ಬೆಳಗ್ಗೆ 9ಕ್ಕೆ ಮೇರಿಹಿಲ್ ಇನ್‌ಲ್ಯಾಂಡ್ ಅಪಾರ್ಟ್‌ಮೆಂಟ್‌ನ ಹತ್ತಿರ ಕರ್ತವ್ಯದಲ್ಲಿದ್ದ ವೇಳೆ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಸಂಪೂರ್ಣ ಚೇತರಿಸಿಕೊಳ್ಳುವಲ್ಲಿ ವಿಲರಾಗಿದ್ದರು. ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಬೆಳಗ್ಗೆ 8.20ಕ್ಕೆ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬಂಟ್ವಾಳದ ಕೇಪು ನೀರ್ಕಜೆಯ ಈಶ್ವರ ನಾಯ್ಕ ಮತ್ತು ದೇವಕಿ ದಂಪತಿಯ ಪುತ್ರ ನಾರಾಯಣ ನಾಯ್ಕ 1989ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಚೆನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಪಣಂಬೂರು, ಬಜಪೆ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಅಂತಿಮ ನಮನ: ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಅಂತಿಮ ನಮನ ಸಲ್ಲಿಸಲಾಯಿತು. ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.