ದುರ್ಗಾಲಕ್ಷ್ಮೀ ದೇವಸ್ಥಾನ 
ಜಿಲ್ಲೆ

21ರಿಂದ ದುರ್ಗಾಲಕ್ಷ್ಮೀ ದೇಗುಲ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ

 ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ 5 ದಿನಗಳ ಕಾಲ ವಿಶೇಷ ಪೂಜೆ

ಸುಂಟಿಕೊಪ್ಪ : ಸುಂಟಿಕೊಪ್ಪ ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಆವರಣದಲ್ಲಿ ನಿರ್ಮಿಸಿರುವ ದುರ್ಗಾಲಕ್ಷ್ಮೀ ದೇವಸ್ಥಾನದ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಡಿ. 21 ರಿಂದ 25ರವರೆಗೆ ನಡೆಯಲಿದೆ.

ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ 1992 ಮೇ 8ರಂದು ಸ್ಥಾಪನೆಗೊಂಡ ನಂತರದ ದಿನಗಳಲ್ಲಿ ದೇವಾಲಯದ ಆವರಣದಲ್ಲಿ ಅಯ್ಯಪ್ಪಸ್ವಾಮಿ, ಕನ್ನಿಮೂಲ ಗಣಪತಿ ಹಾಗೂ ನೈವೇದ್ಯ ಕೊಠಡಿ ಮತ್ತು ದೇವಸ್ಥಾನದ ಕಚೇರಿ ನಿರ್ಮಿಸಲಾಗಿತ್ತು. ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ದುರ್ಗಾಲಕ್ಷ್ಮೀ ದೇವಸ್ಥಾನ ನಿರ್ಮಾಣಕ್ಕೆ 8 ತಿಂಗಳ ಹಿಂದೆ ಪುತ್ತೂರಿನ ಜಗನಿವಾಸ್ ರಾವ್ ಅವರು ಭೂಮಿಪೂಜೆ ನೇರವೇರಿಸಿದ್ದರು. ಪುತ್ತೂರಿನ ಶಿಲ್ಪಿ ಕೃಷ್ಣಪ್ರಸಾದ್ ಅವರ ಕೈಚಳಕದಲ್ಲಿ ದೇಗುಲ ಸುಂದರವಾಗಿ ನಿರ್ಮಾಣವಾಗಿದ್ದು, ಭಕ್ತರು, ದಾನಿಗಳ ನೆರವು ಸೇರಿ 20 ಲಕ್ಷ ರೂ. ವೆಚ್ಚದಲ್ಲಿ ದೇವಿಯ ಆಲಯ ನಿರ್ಮಾಣ ಮಾಡಲಾಗಿದೆ.

ಡಿ.21ರಿಂದ ಕೇರಳದ ತಳಿಪರಂಬ ಕಾಳೇಘಾಟ್ ಇಲ್ಲಂ ಮಧುಸೂದನ್ ತಂತ್ರಿ ಅವರ ನೇತೃತ್ವದಲ್ಲಿ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯ ಆರಂಭಗೊಳ್ಳಲಿದೆ. 22 ರಂದು ಮುಂಜಾನೆ 4 ಗಂಟೆಗೆ ಗಣಪತಿ ಹೋಮ, ತಿಲಾಹೋಮ, ಸಾಯುಜ್ಯಪೂಜೆ ಸಂಜೆ 6 ಗಂಟೆಗೆ ಪ್ರಸಾದಬಿಂಬ ಪರಿಗ್ರಹ, ಜಲಾದಿವಾಸ ಪುಣ್ಯಾಹಃ, ಪ್ರಸಾದಶುದ್ಧಿ, ಅಸ್ತ್ರಕಲಶಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಳಸ ಪೂಜೆ, ವಾಸ್ತು ಬಲಿ, ವಾಸ್ತುಕಲಶಾಭಿಷೇಕ, ಅತ್ತಾಯ ಪೂಜೆ ಮಹಾಮಂಗಳಾರತಿ ನಡೆಯಲಿದೆ. 23 ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, ಬಿಂಬ ಕಳಸ ಪೂಜೆ, ಬಿಂಬ ಕಲಶಾಭಿಷೇಕ, ತ್ರಿಕಾಲ ಪೂಜೆ ಪುಣ್ಯಾಹ, ಮಧ್ಯಾಹ್ನ ಪೂಜೆ ಮಹಾಮಂಗಳಾರತಿ, ಸಂಜೆ ಸ್ಥಳ ಶುದ್ಧಿ, ತ್ರಿಕಾಲ ಪೂಜೆ, ಅತ್ತಾಯ ಪೂಜೆ ಮಹಾ ಮಂಗಳಾರತಿ ನಡೆಯಲಿದೆ. 24 ರಂದು ಬೆಳಗ್ಗೆ 6 ಗಂಟೆಗೆ ಗಣಪತಿಹೋಮ, ಶ್ರೀ ಅಯ್ಯಪ್ಪಸ್ವಾಮಿಗೆ ತತ್ವಹೋಮ, ತತ್ವಕಲಶ ಪೂಜೆ, ತತ್ವ ಕಲಶಾಭಿಷೇಕ, ಶ್ರೀ ಭಗವತಿಯ ಶಯ್ಯ ಪೂಜೆ, ನಿದ್ರಾ ಕಳಸ ಪೂಜೆ, ಮಧ್ಯಾಹ್ನ ಪೂಜೆ, ಮಂಗಳಾರತಿ, ಬಿಂಬ ಶುದ್ಧಿ, ಕಳಸಪೂಜೆ, ಆದಿವಾಸ ಹೋಮ, ಮಂಡಲ ಪೂಜೆ, ಬಿಂಬ ಶುದ್ಧಿ,ಧ್ಯಾನಾಧಿವಾಸಂ, ಅತ್ತಾಯ ಪೂಜೆ ಮಹಾಮಂಗಳಾರತಿ ನಡೆಯಲಿದೆ.

25 ರಂದು ಬೆಳಗ್ಗೆ ಗಣಪತಿ ಹೋಮ, ಆದಿವಾಹನ ವಿಡರ್ತಿ ಪೂಜೆ, ಶ್ರೀ ಅಯ್ಯಪ್ಪ ಸ್ವಾಮಿಯ ಬ್ರಹ್ಮಕಲಶ ಪೂಜೆ, ಶ್ರೀ ಭಗವತಿಯ ಬ್ರಹ್ಮಕಲಶ ಪೂಜೆ, ಗಣಪತಿಯ ಬ್ರಹ್ಮಕಲಶಾಭಿಷೇಕ, ಭಗವತಿಯ ಪ್ರಸಾದ ಪ್ರತಿಷ್ಠೆ ಸಮಯ 10 ರಿಂದ 12 ರ ಶುಭ ಮುಹೂರ್ತ ಕುಂಭ ಲಗ್ನದಲ್ಲಿ ಶ್ರೀ ದುರ್ಗ ಲಕ್ಷ್ಮೀ ದೇವಿಯ ಪ್ರತಿಷ್ಠೆ, ನಿದ್ರಾಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಶ್ರೀ ಅಯ್ಯಪ್ಪಸ್ವಾಮಿಯ ಬ್ರಹ್ಮಕಲಶಾಭಿಷೇಕ ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ. 26ರಂದು ವಾರ್ಷಿಕ ಮಂಡಲಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಶೇಷ ಪೂಜೆ ಬಿಲ್ವಪತ್ರೆ ಅರ್ಚನೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದೂರ್ವಾಚನೆ, ಸಂಜೆ 6.30 ಕ್ಕೆ ದೀಪಾರಾಧನೆ ಮತ್ತು ಮೆರವಣಿಗೆ 7.30 ಕ್ಕೆ ದುರ್ಗಾಪೂಜೆ ನಡೆಯಲಿದೆ. ಭಕ್ತರು ಸನ್ನಿಧಿಗೆ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಪುರಂ ಅಯ್ಯಪ್ಪಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಕಾರ್ಯದರ್ಶಿ ಎಂ.ಚಂದ್ರ, ಖಜಾಂಚಿ ಎಂ.ಆರ್.ಶಶಿಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.