ಸಿದ್ದಾಪುರ: ಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಾಲಯ ವಾಸ್ತುಶಾಸ್ತ್ರ, ಆಗಮೋಕ್ತವಾದ ಎಲ್ಲ ವ್ಯವಸ್ಥೆಗಳನ್ನು ಇಟ್ಟುಕೊಂಡ ದೇವತಾ ಸನ್ನಿಧಿ. ಅದ್ಯಾವುದೋ ಕಾರಣಕ್ಕೆ 60 ವರ್ಷಗಳಿಂದ ಅಷ್ಟಬಂಧ ಮಹೋತ್ಸವ, ಪುನರ್‌ಪ್ರತಿಷ್ಠೆ ನಡೆದಿರಲಿಲ್ಲ. 12 ವರ್ಷಕ್ಕೊಮ್ಮೆ ಅಷ್ಟಬಂಧ ಮಾಡಬೇಕಿತ್ತು. ಒಂದು ತಲೆಮಾರು, ಎರಡು ತಲೆಮಾರು ಸಹ ಅಷ್ಟ ಬಂಧ ಕಂಡಿರಲಿಲ್ಲ. ಅಂತಹ ಕಾರ್ಯಕ್ರಮ ಈಗ ನಡೆಯುತ್ತಿದೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಇಟಗಿಯಲ್ಲಿ ಶ್ರೀ ರಾಮೇಶ್ವರ, ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವರ ಅಷ್ಟಬಂಧ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಸಂದೇಶ ನೀಡಿದರು. ಬಿಳಗಿ ಸೀಮೆಯ ದೇವಾಲಯ ಇದು. ಶ್ರೀ ರಾಮೇಶ್ವರ ಹಾಗೂ ಪರಿವಾರ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ನೆರವೇರಿದೆ. ಬ್ರಹ್ಮಕಲಶೋತ್ಸವ ಮುಂದಕ್ಕೆ ಆಗಲಿದೆ. ಭಕ್ತ ಜನರ ಭಾಗ್ಯವಿದು, ಇಡೀ ಸೀಮೆಯ ಕ್ಷೇಮಕ್ಕೆ, ಬದುಕಿನ ರಕ್ಷೆಗೆ ಈ ಮಹತ್ಕಾರ್ಯ ಕಾರಣವಾಗಿದೆ ಎಂದರು.
ಹಾಸನದ ಸಮರ್ಥ ರಾಮಾವಧೂತ ಆಶ್ರಮದ ಶ್ರೀ ರಾಮಾವಧೂತ ಸ್ವಾಮೀಜಿ ಅವರು ಜನತೆಗೆ ಆಶೀರ್ವಾದ ಮಾಡಿದರು.
ದಿವ್ಯಾಷ್ಟಬಂಧ ಮಹೋತ್ಸವ ಸಮಿತಿ ಹಾಗೂ ಮೊಕ್ತೇಸರ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶಿಷ್ಯಭಕ್ತರು ಪಾಲ್ಗೊಂಡಿದ್ದರು. ವಿವಿಧ ಮಹಿಳಾ ಸಂಘಟನೆಗಳು ನಿರಂತರ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀಗಳ ಪುರಪ್ರವೇಶ
ಶ್ರೀ ರಾಘವೇಶ್ವರ ಭಾರತೀ ಮಾಸ್ವಾಮಿಗಳನ್ನು ಹಾಗೂ ಶ್ರೀ ರಾಮಾವಧೂತ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಉಭಯ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.