ಮೈಸೂರು: ಎರಡು ದಶಕಗಳ ಹಿಂದೆ ಕೃಷ್ಣರಾಜ ಕ್ಷೇತ್ರದಲ್ಲಿ ಆಶ್ರಯ ಮನೆಗೆ ಅರ್ಜಿ ಸಲ್ಲಿಸಿದ 822 ಫಲಾನುಭವಿಗಳಿಗೆ ಇದುವರೆಗೂ ಮನೆ ದೊರೆತ್ತಿಲ್ಲ ಎಂದು ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2003-04 ನೇ ಸಾಲಿನಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಆಶ್ರಮ ಮನೆಗೆ ಅರ್ಜಿ ಸಲ್ಲಿಸಿದೆವು. ವಸತಿಗೋಸ್ಕರ ನಗರ ಪಾಲಿಕೆಯಲ್ಲಿ ಹಣವನ್ನೂ ಪಾವತಿಸಿದ್ದೇವೆ. ಆದರೆ, ಇದುವರೆಗೂ ನಮಗೆ ಮನೆ ನೀಡಿಲ್ಲ. ಈ ಕುರಿತು ಫೆ.8 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಮ್ಮಿಕೊಂಡಿರುವ ಜನತಾ ದರ್ಶನದಲ್ಲಿ ಪಾಲ್ಗೊಂಡು ನಮ್ಮ ಸಮಸ್ಯೆಯ ಕುರಿತು ಗಮನ ಸೆಳೆಯಲಾಗುವುದು ಎಂದು ಫಲಾನುಭವಿಗಳ ಪರವಾಗಿ ಮಂಜು ಹೊಸಬಂಡಿಕೇರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮೊಂದಿಗೆ ಅರ್ಜಿ ಸಲ್ಲಿಸಿದ 2 ಸಾವಿರ ಫಲಾನುಭವಿಗಳ ಪೈಕಿ 1200 ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ನಮಗೂ ಅದೇ ರೀತಿ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಕ್ರಮ ವಹಿಸಬೇಕು. ಸಿದ್ದರಾಮಯ್ಯ ಪ್ರಥಮ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಆಶ್ರಯ ಯೋಜನೆಯ ಫಲಾನುಭವಿಗಳ ಸಾಲ ಮನ್ನಾ ಮಾಡಿದ್ದಲ್ಲದೆ, ಉದ್ದೇಶಿತ ಮನೆಗಳಿಗೆ ಸಂಪೂರ್ಣ ಮಾಲೀಕರೆಂದು ಘೊಷಿಸಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ನಮಗೆ ಮನೆ ನಿರ್ಮಿಸಿಕೊಡದೆ ವಂಚಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಫಲಾನುಭವಿಗಳಾದ ರವಿಕುಮಾರ್, ಮೋಹನ್ ಕುಮಾರ್, ಲಕ್ಷ್ಮಮ್ಮ, ಎನ್. ಅಶ್ವಿನಿ ಹಾಗೂ ಇತರರು ಇದ್ದರು