ವಿಸ್ಪರ್ಸ್​ ಆಫ್​ ವಿಸ್ಡಮ್​' ಮತ್ತು "ಟಾಯ್ಸ್​ - ಗೇಮ್ಸ್​' ಕೃತಿಗಳನ್ನು ರಾಜ್ಯಪಾಲ ಧಾವರ್​ ಚಂದ್​ ಗೆಹ್ಲೋಟ್​, ಸಚಿವ ಬೈರತಿ ಸುರೇಶ್​ ಬಿಡುಗಡೆಗೊಳಿಸಿದರು.  folder
ಜಿಲ್ಲೆ

ಆಶ್ರಮಗಳಿಗೆ ಸಮುದಾಯ ಪ್ರೋತ್ಸಾಹ ಅಗತ್ಯ

ಬಡವರ ಸಮಸ್ಯೆಗೆ ಸ್ಪಂದಿಸುವಂತಹ ಆಶ್ರಮಗಳಿಗೆ ಸಮುದಾಯದ ಪ್ರೋತ್ಸಾಹ ಅಗತ್ಯವಿದೆ ಎಂದು ಸಚಿವ ಬೈರತಿ ಸುರೇಶ್​ ಹೇಳಿದ್ದಾರೆ.

ಬೆಂಗಳೂರು: ಬಡವರ ಸಮಸ್ಯೆಗೆ ಸ್ಪಂದಿಸುವಂತಹ ಆಶ್ರಮಗಳಿಗೆ ಸಮುದಾಯದ ಪ್ರೋತ್ಸಾಹ ಅಗತ್ಯವಿದೆ ಎಂದು ಸಚಿವ ಬೈರತಿ ಸುರೇಶ್​ ಹೇಳಿದ್ದಾರೆ.

ಹೆಬ್ಬಾಳದಲ್ಲಿರುವ ಸುಮಂಗಲಿ ಸೇವಾ ಆಶ್ರಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಶ್ರಮದ ಸಲಹೆಗಾರ ಎನ್​. ಶ್ರೀದೇವಿ ರಚಿಸಿರುವ "ವಿಸ್ಪರ್ಸ್​ ಆಫ್​ ವಿಸ್ಡಮ್​' ಮತ್ತು "ಟಾಯ್ಸ್​ - ಗೇಮ್ಸ್​' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಅಬಲೆಯರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಸುಮಂಗಲಿ ಸೇವಾ ಶ್ರಮ ನಾಡಿನ ಹೆಮ್ಮೆಯ ಸಂಸ್ಥೆ ಎಂದು ಬಣ್ಣಿಸಿದರು.

ಸೇವಾಶ್ರಮ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇಲ್ಲಿ ಆಶ್ರಯ ಪಡೆಯುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಅಗತ್ಯವಿರುವ ಸಹಕಾರವನ್ನು ನೀಡಲು ಸರ್ಕಾರ ಮತ್ತು ಶಾಸಕನಾಗಿ ನಾನು ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದರು.

ಆರ್ಥಿಕವಾಗಿ ಹಿಂದುಳಿದವರು, ಅನಾಥ ಹೆಣ್ಣು ಮಕ್ಕಳನ್ನು ಪೋಷಣೆ ಮಾಡುವ ಮೂಲಕ ಅವರಿಗೆ ಪುನರ್ಜನ್ಮ ನೀಡುವ ಮಹತ್ಕಾರ್ಯ ಪದ್ಮಶ್ರೀ ಪುರಸತೆ ಡಾ.ಎಸ್​.ಜಿ. ಸುಶೀಲಮ್ಮ ನೇತೃತ್ವದ ಆಶ್ರಮ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸುಶೀಲಮ್ಮ ತಂಡ ನಡೆಸುತ್ತಿರುವ ಕಾರ್ಯದಿಂದಾಗಿ ಸಾವಿರಾರು ಹೆಣ್ಣು ಮಕ್ಕಳು ಸಮಾಜದಲ್ಲಿ ಸ್ವಾವಲಂಬಿ ಜೀವನ ಸಾಗಿಸುವಂತಾಗಿದೆ. ಈ ಕಾರಣದಿಂದಲೇ ಸುಶೀಲಮ್ಮ ಅವರು ಕೇವಲ ಆಶ್ರಮ ವಾಸಿಗಳಿಗೆ ತಾಯಿಯಲ್ಲ, ಇಡೀ ಹೆಬ್ಬಾಳ ಕ್ಷೇತ್ರದ ಮಹಾತಾಯಿಯಾಗಿದ್ದಾರೆ ಎಂದರು.

ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಸಚಿವೆ ರಾಣಿ ಸತೀಶ್​, ಡಾ.ಸಿ.ಸೋಮಶೇಖರ್​, ಲೇಖಕಿ ಡಾ.ಸುಶೀಲಮ್ಮ, ಎನ್​. ಶ್ರೀದೇವಿ ಉಪಸ್ಥಿತರಿದ್ದರು.