ಜಿಲ್ಲೆ

ಪಿಯುಸಿಗೆ ಆಶ್ರಮ ಶಾಲೆ ಉನ್ನತೀಕರಣ

ಮಾದೇಶ್ ತಿ.ನರಸೀಪುರ

ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಆಶ್ರಮ ಶಾಲೆಗಳಲ್ಲಿ ಸಮರ್ಪಕ ಮೂಲಸೌಕರ್ಯ ಕಲ್ಪಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ನುರಿತ ಶಿಕ್ಷಕರ ನೇಮಕ, ಪಿಯು ಕಾಲೇಜುಗಳ ಸ್ಥಾಪನೆಗೆ ಕ್ರಮವಹಿಸಲಾಗುತ್ತಿದೆ ಎಂದು ಗಿರಿಜನ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಿ.ರಂದೀಪ್ ಹೇಳಿದರು.

ತಾಲೂಕಿನ ನಲ್ಲೂರುಪಾಲ ಆಶ್ರಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳು ಮತ್ತು ಗಿರಿಜನ ಮುಖಂಡರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಾಲಿನ ಬಜೆಟ್‌ನಲ್ಲಿ ಸರ್ಕಾರ 200 ಕೋಟಿ ರೂ.ಗಳನ್ನು ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲಿರಿಸಿದೆ. ಜಿಲ್ಲೆಯಲ್ಲಿ 5 ಆಶ್ರಮ ಶಾಲೆಗಳನ್ನು 12ನೇ(ಪಿಯುಸಿ) ತರಗತಿಯವರೆಗೆ ಉನ್ನತೀಕರಣಗೊಳಿಸಲು ನಿರ್ಧರಿಸಲಾಗಿದೆ. ಈ ಪೈಕಿ ನಲ್ಲೂರುಪಾಲ ಆಶ್ರಮ ಶಾಲೆಯೂ ಒಂದಾಗಿದೆ. ಹಂತ ಹಂತವಾಗಿ ಒಂದೊಂದು ವರ್ಷ ಒಂದೊಂದು ತರಗತಿಯನ್ನು ತೆರೆಯಲಾಗುವುದು ಎಂದು ಪ್ರಕಟಿಸಿದರು.

ಶಿಕ್ಷಕರ ನೇರ ನೇಮಕಾತಿ: ಆಶ್ರಮ ಶಾಲೆಗಳಲ್ಲಿ ಶಿಕ್ಷಕರ ಅದರಲ್ಲೂ ನುರಿತ ಶಿಕ್ಷಕರ ಕೊರತೆ ಬಹಳಷ್ಟು ಕಾಡುತ್ತಿರುವುದು ನಿಜ. ಶಿಕ್ಷಕರ ಕೊರತೆ ನೀಗಲು ಮುಖ್ಯಮಂತ್ರಿಗಳು ಈಗಾಗಲೇ ಹೊಸ ನೇಮಕಾತಿಗೆ ಅವಕಾಶ ನೀಡಿದ್ದಾರೆ. ಆದರೆ, ಒಳಮೀಸಲಾತಿ ವಿಷಯದ ಕುರಿತು ಗೊಂದಲಗಳು ಇದ್ದು, ಒಳಮೀಸಲಾತಿ ಗೊಂದಲ ಪರಿಹಾರವಾದ ಕೂಡಲೇ ನುರಿತ ಶಿಕ್ಷಕರ ನೇರ ನೇಮಕಾತಿ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಹಾಲಿ ಇರುವ ಗುತ್ತಿಗೆ ಶಿಕ್ಷಕರಿಗೆ ಅವರ ವಿದ್ಯಾರ್ಹತೆ ಮತ್ತು ಸೇವಾ ಅವಧಿಯನ್ನಾಧರಿಸಿ ಪರಿಹಾರೋಪಾಯಗಳನ್ನು ನೀಡಲಾಗುವುದು. ಆಶ್ರಮ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು, ಸಂಗೀತ, ಕಲೆ ಸಾಹಿತ್ಯ, ಆರೋಗ್ಯ ಮುಂತಾದವುಗಳ ಕುರಿತಾಗಿ ಅಭಿರುಚಿ ಮೂಡಿಸುವ ಶಿಕ್ಷಕರನ್ನು ನೇಮಿಸಿಕೊಳ್ಳುವ ಕುರಿತು ಗಂಭೀರ ಚಿಂತನೆ ನಡೆದಿದೆ. ಸಿಬ್ಬಂದಿ ಕೊರತೆಯನ್ನು ಸರಿದೂಗಿಸಲೂ ಹಂತ ಹಂತವಾಗಿ ಕ್ರಮವಹಿಸಲಾಗುವುದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕುಂದುಕೊರತೆಗಳು ಕಂಡುಬಂದಲ್ಲಿ ನನಗೆ ನೇರವಾಗಿ ತಿಳಿಸಿರಿ ಎಂದು ಕೋರಿದರು.

ಇಲಾಖೆ ರಾಜ್ಯ ನಿರ್ದೇಶಕ ಯೋಗೇಶ್ ಮಾತನಾಡಿ, ಪಿಎಂ ಜನಮನ ಯೋಜನೆಯಡಿ ಜೇನುಕುರುಬ ಮತ್ತು ಕೊರಗ ಸಮುದಾಯಗಳಿಗೆ ವಸತಿ ಸೌಕರ್ಯಕ್ಕಾಗಿ ಒದಗಿಸುತ್ತಿದ್ದ ಆರ್ಥಿಕ ಸಹಾಯವನ್ನು 4.50 ಲಕ್ಷ ರೂ.ಗಳಿಗೆ ಏರಿಸಲಾಗಿದೆ. 1560 ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯಲಿದ್ದು, ಯೋಜನೆಯ ಸಂಪೂರ್ಣ ಸದುಪಯೋಗಪಡಿಸಿಕೊಳ್ಳಬೇಕು. ಅರಣ್ಯ ಆಧಾರಿತ ಮೂಲ ಗಿರಿಜನರ(ಪಿವಿಟಿಜಿ) ಪೈಕಿ 12 ಸಾವಿರ ಮನೆಗಳಿಗೆ ಬೇಡಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ವಿವಿಧ ಆಶ್ರಮ ಶಾಲೆಯ ವಿದ್ಯಾರ್ಥಿಗಳು, ಆದಿವಾಸಿಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಧರ್ತಿಹಬ್ಬ ಕಾರ್ಕ್ರಮದಡಿ ಜನಧನ ಯೋಜನೆಯಡಿ 66 ಗಿರಿಜನ ಕುಟುಂಬಗಳಿಗೆ ಬ್ಯಾಂಕ್ ಖಾತೆ ಪಾಸ್ ಬುಕ್‌ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಇಲಾಖೆ ರೂಪಿಸಿದ ಆರೋಗ್ಯದ ಕಿಟ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ಜಂಟಿ ನಿರ್ದೇಶಕ ಮಲ್ಲೇಶ್, ಗಿರಿಜನ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ಡಾ.ರವೀಶ್, ಲೆಕ್ಕಾಧಿಕಾರಿ ಭವ್ಯಾ, ತಾಲೂಕು ಸಹಾಯಕ ನಿರ್ದೇಶಕ ಗಂಗಾಧರ್, ಮುಖ್ಯಶಿಕ್ಷಕ ಚೇತನ್‌ಕುಮಾರ್ ಇತರರು ಇದ್ದರು.