ರಾಮದುರ್ಗ: ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಕಾರ್ಮಿಕ ಕಾರ್ಡ್ ನೋಂದಣಿಗೆ ಲಂಚ ಪಡೆಯುತ್ತಿರುವ ಬಗ್ಗೆ ದೂರು ಕೇಳಿಬಂದಿವೆ. ನಿಮಗೆ ಹೇಳುವವರು ಕೇಳುವವರು ಯಾರು ಇಲ್ಲವೆ ಎಂದು ವಿಧಾನಸಭೆ ಮುಖ್ಯ ಸಚೇತಕ, ಶಾಸಕ ಅಶೋಕ ಪಟ್ಟಣ ಅವರು ಕಾರ್ಮಿಕ ನಿರೀಕ್ಷಕ ನಾಗರಾಜ ಮಧೂರ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಲಸದ ವೇಳೆ ಇಲಾಖೆಯಲ್ಲಿ ಲಭ್ಯವಿರದೆ ಏಜೆಂಟ್ ಮೂಲಕ ಕೆಲಸ ನಿರ್ವಹಿಸುವ ಕುರಿತು ದೂರುಗಳು ಕೇಳಿ ಬಂದಿವೆ. ಸ್ವತಃ ನಾನೇ ಹಲವು ಬಾರಿ ಕಚೇರಿಗೆ ಬಂದರೂ ಕೈಗೆ ಸಿಗುತ್ತಿಲ್ಲ. ನಿಮ್ಮ ನಡೆ ಸರಿಪಡಿಸಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
40 ವರ್ಷಗಳಿಂದ ಅರಣ್ಯ ಇಲಾಖೆ ಭೂಮಿಯಲ್ಲಿ ಮನೆ ಮಾಡಿಕೊಂಡಿರುವ ಜನರನ್ನು ತೆರವುಗೊಳಿಸಬೇಡಿ. ಅವರನ್ನು ಸಕ್ರಮಗೊಳಿಸಲು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ. ಅರಣ್ಯ ಇಲಾಖೆ ಅಧಿಕಾರಿಗಳು ಅಂತಹ ನಾಗರಿಕರಿಗೆ ತೊಂದರೆ ಕೊಡಬಾರದು ಎಂದು ಸೂಚಿಸಿದರು.
ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಗೆ ಪೊಲೀಸರು ಸ್ಪಂದಿಸಬೇಕು. ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಸ್ಥಳದಲ್ಲಿದ್ದ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳಗೆ ತಿಳಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಕೆಲಸ ಕಾರ್ಯಗಳ ಬಗೆಗೆ ಸಭೆಗೆ ಮಾಹಿತಿ ನೀಡಿದರು. ಇಲಾಖೆ ಅಧಿಕಾರಿಗಳ ವರದಿ ಆಲಿಸಿದ ಅಶೋಕ ಪಟ್ಟಣ ಅವರು, ತಾಲೂಕಿನ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸಬೇಕು. ಒಂದು ವೇಳೆ ದೂರುಗಳು ಕೇಳಿ ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಪಂ ಆಡಳಿತಾಧಿಕಾರಿ ಚೇತನಕುಮಾರ, ತಾಪಂ ಇಒ ಬಸವರಾಜ ಐನಾಪುರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.