ಜಿಲ್ಲೆ

ನ.2ರಂದು ಪುತ್ತೂರಿಗೆ ಸಿಎಂ - 3.5 ಕೋಟಿ ರೂ ಮೊತ್ತದ ವಸ್ತ್ರ ವಿತರಣೆ - ಪೂರ್ವಭಾವಿ ಸಭೆಯಲ್ಲಿ ಶಾಸಕ ಅಶೋಕ್ ರೈ ಮಾಹಿತಿ

Mangaluru - Nishantha Narayana


ಪುತ್ತೂರು: ದೀಪಾವಳಿ ಸಂದರ್ಭ ಬಡವರಿಗೆ ವಸ್ತ್ರ ವಿತರಣೆಯನ್ನು ಕಳೆದ 10 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದ್ದು, 11ನೇ ವರ್ಷದ ಕಾರ್ಯಕ್ರಮ ನವೆಂಬರ್ 2ರಂದು ಪುತ್ತೂರು ಕೊಂಬೆಟ್ಟು ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. 75 ಸಾವಿರ ಮಂದಿಗೆ ವಸ್ತ್ರ ವಿತರಣೆ,45 ಸಾವಿರ ಮಂದಿಗೆ ಊಟದ ತಯಾರಿಗೆ ಸಿದ್ದತೆ ಮಾಡಲಾಗಿದೆ. ಸುಮಾರು 3.5ಕೋಟಿ ವೆಚ್ಚವನ್ನು ವಸ್ತ್ರಕ್ಕಾಗಿ ವಿನಿಯೋಗಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ದರ್ಬೆಯ ಟ್ರಸ್ಟ್ ಕಚೇರಿಯಲ್ಲಿ ರೈ ಎಸ್ಟೇಟ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಸಂದರ್ಭನಡೆಯುವ ವಸ್ತ್ರ ವಿತರಣೆಯ ಅಶೋಕ್ ಜನ-ಮನ 2024 ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


ಪುರುಷರಿಗೆ ಬೆಡ್‌ಶೀಟ್ ಹಾಗೂ ಮಹಿಳೆಯರಿಗೆ ಸೀರೆ ವಿತರಿಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ವಯಸ್ಕರಿಗೆ ದೇವಸ್ಥಾನದ ಬಳಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಜನರಿಗೆ ಮಾಹಿತಿ ನೀಡುವ ಕೆಲಸ ನಡೆಯಬೇಕಾಗಿದ್ದು, ಗ್ರಾಮ ಭೇಟಿಯ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಶಕ್ತಿ ಇರುವ ತನಕ ವಸ್ತ್ರ ವಿತರಣೆ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದರು.


ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರಾದ ಕೃಷ್ಣ ಪ್ರಸಾದ್ ಬೊಳ್ಳಾವು, ಮಹಮ್ಮದ್ ಬಡಗನ್ನೂರು, ಜಯಪ್ರಕಾಶ್ ಬದಿನಾರು, ನಿಹಾಲ್ ಶೆಟ್ಟಿ, ಪ್ರಮುಖರಾದ ಅಮಳ ರಾಮಚಂದ್ರ, ಮುರಳೀಧರ ರೈ ಮಠಂದಬೆಟ್ಟು, ನಿರಂಜನ ರೈ ಮಠಂದಬೆಟ್ಟು, ಕಾವು ಹೇಮನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿನ ಸಿಬ್ಬಂದಿ ಜುನೈದ್, ರಚನಾ, ಪ್ರವೀಣ್, ರಂಜಿತ್ ಸಹಕರಿಸಿದರು.


ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿದ್ದು, ಅತ್ಯುತ್ತಮ ಗೂಡು ದೀಪಗಳ ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು. ವಸ್ತ್ರ ವಿತರಣೆ ರಾಜಕೀಯ ರಹಿತವಾಗಿ ನಡೆಯುವ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸಬೇಕು. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಆಮಂತ್ರಣವನ್ನು ವಾಟ್ಸಾಪ್‌ನಲ್ಲಿ ಎಲ್ಲರಿಗೂ ಕಳುಹಿಸಲಾಗುವುದು. ಗ್ರಾಮಗಳಲ್ಲಿ ನೀತಿ ಸಂಹಿತೆ ಬಳಿಕ ಪ್ಲೆಕ್ಸ್ ಗಳನ್ನು ಅಳವಡಿಸಿ ಹೆಚ್ಚಿನ ಪ್ರಚಾರ ಮಾಡುವ ಹೊಣೆ ಸ್ಥಳೀಯ ಮಟ್ಟದವರಿಗೆ ಇದೆ.
| ಅಶೋಕ್ ಕುಮಾರ್ ರೈ
ಶಾಸಕರು, ಪುತ್ತೂರು