ಮಡಿಕೇರಿ:
ರಾಜ್ಯದಲ್ಲಿ ಸದ್ಯ ಅಸ್ತಿತ್ವದಲ್ಲಿ ಇರುವುದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಸಮ್ಮಿಶ್ರ ಸರ್ಕಾರ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಲೇವಡಿ ಮಾಡಿದರು. ಮಡಿಕೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸರ್ಕಾರ ಯಾವಾಗ ಬಿದ್ದುಹೋಗುತ್ತದೆ ಎಂದು ಹೇಳಲು ಆಗುವುದಿಲ್ಲ. ಇಬ್ಬರು ಕೂಡ ತಮ್ಮ ಪರವಾಗಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ನ ೬ನೇ ಗ್ಯಾರಂಟಿ ರೂಪಿಸುತ್ತಿದೆ. ಅಕ್ಕಿ ಬದಲು ಹಣ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೇ ಬಿಜೆಪಿ ಕೂಡ ಸಲಹೆ ಕೊಟ್ಟಿತ್ತು. ಆಗ ’ಹಣವನ್ನು ತಿನ್ನಲು ಆಗುತ್ತೇನ್ರಿ ? ದುಡ್ಡು ಕೊಡಲು ಹೇಳಿದವರಿಗೆ ಜ್ಞಾನ ಇದೆಯಾ,’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಈಗ ಹಣ ಕೊಡುವ ತೀರ್ಮಾನ ಅವರೇ ತೆಗೆದುಕೊಂಡಿದ್ದಾರೆ. ಅವರಿಗೆ ಜ್ಞಾನ ಇದೆಯಾ ಎಂದು ಈಗ ಪ್ರಶ್ನಿಸಿದಬೇಕಿದೆ ಎಂದರು.
ಮೋಸ, ಭ್ರಷ್ಟಾಚಾರ ಕಾಂಗ್ರೆಸ್ ಡಿಎನ್‌ಎಯಲ್ಲೇ ಇದೆ. ಮುಂಬರುವ ೫ ರಾಜ್ಯಗಳ ಚುನಾವಣೆಗೆ ಕರ್ನಾಟಕವೇ ಎಟಿಎಂ. ಹಾಗಾಗಿ ದುಡ್ಡು ಹೊಡೆಯುವ ಉದ್ದೇಶಕ್ಕೆ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ವರ್ಗಾವಣೆಯ ದಂಧೆಯೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ನ ೫ ಗ್ಯಾರಂಟಿಗಳು ಲೋಕಸಭಾ ಚುನಾವಣೆ ಉದ್ದೇಶಕ್ಕಾಗಿಯೇ ರೂಪಿಸಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳು ಜಾರಿ ಆಗುತ್ತದೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ ೧ ಯೋಜನೆ ಮಾತ್ರ ಜಾರಿಯಾಗಿದೆ. ಯಾವ ಯೋಜನೆಗಳಲ್ಲೂ ಸ್ಪಷ್ಟತೆ ಇಲ್ಲ. ಇವರ ಗ್ಯಾರಂಟಿಗಳು ಜಾರಿ ಆಗದಿರುವುದಕ್ಕೆ ನರೇಂದ್ರ ಮೋದಿ ಅವರನ್ನು ದೂಷಿಸಲಾಗುತ್ತಿದೆ. ಈಗಿನ ಬೆಲೆ ಏರಿಕೆಗೆ ನೇರವಾಗಿ ಸಿದ್ದರಾಮಯ್ಯ ಅವರೇ ಕಾರಣ ಎಂದರು.
ಅಧಿವೇಶನ ವೇಳೆ ವಿಪಕ್ಷ ನಾಯಕರ ಆಯ್ಕೆ ಮಾಡಲಾಗುವುದು. ಚುನಾವಣೆಯಲ್ಲಿ ಬಿಜೆಪಿ ಸೋಲುವುಸಕ್ಕೆ ಒಳ ಮೀಸಲಾತಿ ಮಾತ್ರ ಕಾರಣವಲ್ಲ. ಬೇರೆ ಕಾರಣಗಳೂ ಇದೆ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.