ವಿಜಯಪುರ: ನಗರದಿಂದ 9 ಕಿಮೀ ಅಂತರದಲ್ಲಿರುವ ಜುಮನಾಳ ಗ್ರಾಮದಲ್ಲಿನ ಶ್ರೀ ಹರಿ ಮಂದಿರ ರುಕ್ಮಿಣಿ ದೇವಾಲಯದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ಗುರುವಾರ ವಿಶೇಷ ಪೂಜೆ ಅಲ್ಲದೇ ಕಾಕಡಾರತಿ, ಭಜನಾ ಮಂಡಳಿಗಳಿಂದ ಭಜನೆ ಮತ್ತು ಭಗವದ್ಗೀತಾ ಪಠಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಮಂದಿರವು ಶ್ರೀ ಗುರು ಬಾಬಾಸಾಹೇಬ ಅಜರೇಕರ ಫಡ ಶ್ರೀ ಕ್ಷೇತ್ರ ಪಂಢರಾಪುರದ ಶಾಖೆಯಾಗಿದ್ದು, ಇದನ್ನು ಖ್ಯಾತ ಜೋತಿಷಿ ದಿವಂಗತ ರಮೇಶ ಭಟ್ಟ ಜೋಶಿ(ಜುಮನಾಳಕರ) ಸ್ವಂತ ಖರ್ಚಿನಿಂದ ತಮ್ಮ ಹುಟ್ಟೂರಾದ ಜುಮನಾಳದಲ್ಲಿ 1988 ರಲ್ಲಿ ನಿರ್ಮಿಸಿರುವರು.
ದೇವಾಲಯದ ಧರ್ಮದರ್ಶಿ ಕಿರಣಭಟ್ಟ ರಮೇಶಭಟ್ಜ ಜೋಶಿ (ಜುಮನಾಳಕರ) ನೇತೃತ್ವದಲ್ಲಿ ಬೆಳಗ್ಗೆ ರುಕ್ಮಿಣಿ ಪಾಂಡು ರಂಗ ಮೂರ್ತಿಗೆ ಅಭಿಷೇಕ ಮಾಡಲಾಯಿತು. ಶ್ರೀಕಾಂತ ಭಟ್ಟ ( ಶಂಭು) ಜೋಶಿ, ಗಣಪತಿ ಜೋಶಿ ಹಾಗೂ ರುಕ್ಮಾಂಗದ ಭಡಜಿ ಮುಂತಾದವರಿಂದ ಅಲಂಕಾರ ಪೂಜೆ ಮಂಗಳಾರತಿ ನಡೆದವು.
ಬಳಿಕ ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ದೇವರ ನಾಮಗಳನ್ನು ಹಾಡಲಾಯಿತು. ಈ ಭಜನಾ ಕಾರ್ಯಕ್ರಮ ನಿರಂತರವಾಗಿ ರಾತ್ರಿ ವರೆಗೆ ನಡೆಯುತ್ತಲಿವೆ. ಸುಮಾರು ಮೂವತ್ತಕ್ಕೂ ಮಿಕ್ಕಿ ಭಜನಾ ಮಂಡಳಿಗಳ ಸದಸ್ಯರು ಇದರಲ್ಲಿ ಭಾಗವಹಿಸಿ ತಮ್ಮ ಸಂಗೀತ ಸೇವೆ ಸಲ್ಲಿಸಿದರು. ಸಂಜೆ ಭಜನಾ ಕಾರ್ಯಕ್ರಮ ನಿರಂತರವಾಗಿ ರಾತ್ರಿ ಸಂತರ ಜಾಗರಣೆ, ದಿಂಡಿ ಗ್ರಾಮ ಪ್ರದಕ್ಷಿಣೆ ನಡೆದವು.
ನಂತರ ಭಗವದ್ಗೀತಾ ಪಠಣವನ್ನು ಭಕ್ತರು ಮಾಡುವ ಮೂಲಕ ಉತ್ಸವಕ್ಕೆ ಕಳೆ ತಂದರು. ಆಗಮಿಸಿದ ಭಕ್ತ ಮಂಡಳಿಗೆಲ್ಲ ದೇವಸ್ಥಾನದ ಪರವಾಗಿ ಫಲಹಾರದ ವ್ಯವಸ್ಥೆ ಮಾಡಲಾಗಿತ್ತು.
ಅರುಣ ಸೋಲಾಪುರಕರ, ವಿಲಾಸ ಜೋಶಿ, ಅರವಿಂದ ಜೋಶಿ, ಗಣಪತಿ ಜೋಶಿ, ಅಶೋಕ ದಿಕ್ಷಿತ, ಶಂಕರ ಕುಲಕರ್ಣಿ (ಗಿರಗಾವಿ), ಹಣಮಂತ ಕೆ.ಗುಡಿ, ರಾಘವೇಂದ್ರ ಕುಲಕರ್ಣಿ(ಗಿರಗಾಂವಿ) ಮತ್ತಿತರರಿದ್ದರು.