ಬೆಂಗಳೂರು: ಆಷಾಢ ಮಾಸದ ಅಂಗವಾಗಿ ನಗರದ ಬನಶಂಕರಿ, ರಾಜರಾಜೇಶ್ವರಿ, ನಿಮಿಷಾಂಭ, ಗಂಗಮ್ಮ, ಮಾರಮ್ಮ, ಬಂಡೆಕಾಳಮ್ಮ, ಚೌಡೇಶ್ವರಿ ಸೇರಿ ನಾನಾ ದೇವಿ ದೇವಾಲಯಗಳಿಗೆ ಮೊದಲ ಶುಕ್ರವಾರ ಮುಂಜಾನೆಯಿಂದ ರಾತ್ರಿವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪ್ರಮುಖವಾಗಿ ನಗರದ ಬನಶಂಕರಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ನಿಂಬೆಹಣ್ಣಿನ ದೀಪ, ಬೆಲ್ಲದ ಆರತಿ ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ದೇವಿಯನ್ನು ಪ್ರಾರ್ಥಿಸಿದರು.
ಆಷಾಢ ಮಾಸದ ಪ್ರಯುಕ್ತ ಬನಶಂಕರಿ ದೇವಿಗೆ ಪಂಚಾಮೃತ ಅಭಿಷೇಕ ನಡೆಸಿ, ವಿಶೇಷವಾಗಿ ಮಣಿಗಳು ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಮತ್ತು ಸಂಜೆ ಪ್ರಾಕಾರೋತ್ಸವ ನೆಡೆಸಿ ಮಹಾಮಂಗಳಾರತಿ ಬೆಳಗಲಾಯಿತು. ಇದೇ ವೇಳೆ ಗಣಪತಿ ಗುಡಿ, ಮಹೇಶ್ವರ ಗುಡಿಯಲ್ಲಿ ಹಾಗೂ ಪಕ್ಕದ ಶಾಕಾಂಬರಿ ದೇವಿ ಹಾಗೂ ಉತ್ಸವ ಮೂರ್ತಿಗಳಿಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ದೇವಾಲಯಕ್ಕೆ 30 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದು, ನಿಯಂತ್ರಿಸಲು ದೇವಾಲಯದ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡೆಬೇಕಾಯಿತು. ದೇವಾಲಯದ ಒಳಗೆ ಜನಸಂದಣಿ ಹೆಚ್ಚಿದ್ದರಿಂದ ಬಹುತೇಕರು ಹೊರಗೆ ಮುಖ್ಯದ್ವಾರದಲ್ಲೇ ನಿಂತು ನಿಂಬೆಹಣ್ಣಿನ ದೀಪ ಹೆಚ್ಚಿದರು. ದೇವಾಲಯದ ಅನ್ನದಾಸೋಹ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ: ಹಿಂದೂ ಸಂಪ್ರದಾಯದಲ್ಲಿ ಆಷಾಢ ಮಾಸದ ಶುಕ್ರವಾರ ದೇವರ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ವಿವಿಧ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಗರ್ಭಗುಡಿ ಎದುರು ವಿಶೇಷ ದರ್ಶನ ಸ್ಥಗಿತ: ಸಾಮಾನ್ಯವಾಗಿ ಬನಶಂಕರಿ ದೇವಾಲಯದಲ್ಲಿ ಶುಕ್ರವಾರ, ಮಂಗಳವಾರ ಮತ್ತು ವಿಶೇಷ ದಿನಗಳಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗೆ ಬಂದವರಲ್ಲಿ ಪ್ರಭಾವಿಗಳು ಹಾಗೂ ಅವರ ಕಡೆಯವರಿಗೆ ದೇವಿಯ ಗರ್ಭಗುಡಿಯ ಎದುರು ಕೂತು ದೀಪ ಬೆಳಗುವುದು, ಮಹಾಮಂಗಳಾರತಿ, ಕುಂಕುಮಾರ್ಚನೆ ಮಾಡಿಸಿ ದರ್ಶನ ಪಡೆಯಲು ಅವಕಾಶವಿತ್ತು. ಇದೀಗ ಅದೆಲ್ಲವನ್ನೂ ನಿಷೇಧಿಸಲಾಗಿದೆ. ಎಷ್ಟೇ ಪ್ರಭಾವಿಗಳು ಬಂದರೂ ಗರ್ಭಗುಡಿಯ ಮುಂಭಾಗದಲ್ಲಿ ಕೂರಿಸದೆ ಎಲ್ಲರಂತೆ ಸರತಿ ಸಾಲಿನಲ್ಲಿ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ.