ವಿಜಯಪುರ: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 10 ಸಾವಿರ ರೂಪಾಯಿ ವೇತನ ನೀಡುವುದಾಗಿ ಭರವಸೆ ನೀಡಿರುವ ರಾಜ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಎಚ್ಚರಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಆಶಾ ಕಾರ್ಯಕರ್ತೆಯರು ಹಮ್ಮಿಕೊಂಡಿದ್ದ ಧರಣಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಜನವರಿಯಲ್ಲಿ ರಾಜ್ಯ ಮಟ್ಟದ ಸುಮಾರು 42000 ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಸತತ 4 ದಿನ ಹೋರಾಟ ಕೈಗೊಂಡಾಗ ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಬೇಡಿಕೆ ಈಡೇರಿಲ್ಲ ಎಂದರು.
ಈ ದೇಶದ ದೊಡ್ಡ ಶ್ರೀಮಂತರಿಗೆ ಕೋಟಿ ಕೋಟಿ ರೂಪಾಯಿ ಸಾಲ ನೀಡಿ ಈಗ ಅವರ ಸಾಲವವನ್ನೇ ಕೇಳದ ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡುವ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇವಲ 10 ಸಾವಿರ ರೂಪಾಯಿ ನೀಡಲು ಹಿಂದೇಟು ಹಾಕುತ್ತಿವೆ ಎಂದರು.
ಬ್ಯಾಂಕ್ ಯೂನಿಯನ್ ನಿವೃತ್ತಿ ಅಧಿಕಾರಿ ಜಿ.ಜಿ. ಗಾಂಧಿ ಮಾತನಾಡಿ, ಒಂದು ಕುಟುಂಬ ಜೀವನ ನಿರ್ವಹಿಸಲು ಕನಿಷ್ಠ 25 ಸಾವಿರ ರೂಪಾಯಿ ವೇತನದ ಅವಶ್ಯಕತೆಯಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಡಾಕ್ಟರ್‌ರಂತೆ ಪ್ರಥಮ ಚಿಕಿತ್ಸೆ ಮಾಡುತ್ತಾ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರಿಗೆ ಕನಿಷ್ಠ ಪ್ರೋತ್ಸಾಹಧನ ಕೂಡ ನೀಡುತ್ತಿಲ್ಲ. ಹೆಚ್ಚು ಕೆಲಸ ತೆಗೆದುಕೊಂಡು ಕಡಿಮೆ ಸಂಬಳ ನೀಡುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕನಿಷ್ಠ ವೇತನ ನೀಡದೆ ಅವರಿಂದ ದುಡಿಸಿಕೊಳ್ಳುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಎಐಯುಟಿಯುಸಿ ಜಿಲ್ಲಾ ಮುಖಂಡ ಎಚ್.ಟಿ. ಭರತಕುಮಾರ ಮಾತನಾಡಿ, ಆಶಾ ಸಂಘಟಿತ ಹೋರಾಟ ಬಲಿಷ್ಠಗೊಳ್ಳಬೇಕು. ಕೊಟ್ಟ ಮಾತಿಗೆ ತಪ್ಪಿದಂತಹ ರಾಜ್ಯ ಸರ್ಕಾರ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವ ಕೆಂದ್ರ ಸರ್ಕರಗಳು ಇಂದು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತಿಲ,್ಲ ಮಾಲೀಕರ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತಿದೆ. ನಮ್ಮ ದುಡಿತಕ್ಕೆ ನಮಗೆ ನ್ಯಾಯಯುತವಾಗಿ ಸಲ್ಲಬೇಕಾಗದ ಕನಿಷ್ಠ ವೇತನ 10 ಸಾವಿರ ರೂಪಾಯಿ ಕೂಡಲೇ ಜಾರಿಗೊಳಿಸಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಸಿದ್ಧಲಿಂಗ ಬಾಗೇವಾಡಿ, ಜಯಶ್ರೀ ಕುಂಬಾರ, ಮೆಹರುನ್ನಿಸಾ ಜಬನೂರು, ರೇಣುಕಾ ಕಲಗುಟಿಕರ, ಲಕ್ಷ್ಮಿ ಸೀಮೆಕೇರಿ ಮತ್ತಿತರರಿದ್ದರು. 300ಕ್ಕೂ ಅಧಿಕ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.