ಜಿಲ್ಲೆ

ಬೇಡಿಕೆ ಈಡೇರಿಕೆಗೆ ಒತ್ತಾಯ: ಆಶಾ ಕಾರ್ಯಕರ್ತೆಯರ ಧರಣಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಮುಖ್ಯಮಂತ್ರಿ ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಟ 10 ಸಾವಿರ ರೂ.ಗಳನ್ನು ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿದರು. ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ, ಆರೋಗ್ಯ ಸೇವೆಗಳನ್ನು ಪಡೆಯಲು ಕಷ್ಟಪಡುವ ಗ್ರಾಮೀಣ ಜನತೆಯ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾವುದೇ ಆರೋಗ್ಯ ಸಂಬಂಧಿತ ಬೇಡಿಕೆಗಳಿಗೆ ಮೊದಲ ಕರೆ ಬರುತ್ತವೆ. ಜನತೆಯ ಮತ್ತು ಸರ್ಕಾರದ ನಿರೀಕ್ಷೆಯಂತೆ ಆಶಾ ತನ್ನ ಸೇವೆಯಿಂದ ಕಟ್ಟಕಡೆಯ ಜನರನ್ನೂ ಆರೋಗ್ಯವಂತರನ್ನಾಗಿಡಲು ಹಗಲು-ರಾತ್ರಿ ಶ್ರಮಿಸುತ್ತಿರುವರು. ಇವರ ಸೇವೆಗೆ ಸಮುದಾಯದಿಂದ ಸಿಗುವ ಗೌರವಾಧಾರಗಳು ಸಂತಸ ನೀಡಿವೆಯಾದರೂ, ಸೇವೆ ಪಡೆದುಕೊಳ್ಳುವ ನಮ್ಮ ಸರ್ಕಾರಗಳು ಸೇವೆಗೆ ತಕ್ಕ ಪ್ರತಿಫಲ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ, ಕಳೆದ ಜನವರಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಈ ವರ್ಷದ ಬಜೆಟ್‌ನಲ್ಲಿ ಎಲ್ಲ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ, ಇದುವರೆಗೂ ಅದು ಜಾರಿಗೆ ಬಂದಿಲ್ಲ. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂ. ಹೆಚ್ಚಿಸಿದಂತೆ, 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂ. ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ.ಪುಷ್ಪಾವತಿ, ಕಾರ್ಯದರ್ಶಿ ಕೆ.ವಿ.ಜ್ಯೋತಿ, ಮಂಜುಳಾ, ರಾಣಿ, ರೇಣುಕಾ, ಪ್ರಭಾವತಿ, ಕೋಮಲಾ, ಜ್ಯೋತಿ, ತಾರಾ, ಆಶಾರಾಣಿ, ರಶ್ಮಿ, ಮಂಜಮ್ಮ, ಇಂದ್ರಮ್ಮ, ಪಲ್ಲವಿ, ಕವಿತಾ, ಪವಿತ್ರಾ, ದಾಕ್ಷಾಯಿಣಿ, ರಾಜಮಣಿ, ಲಕ್ಷ್ಮೀ ಇತರರಿದ್ದರು.

ಹಕ್ಕೊತ್ತಾಯಗಳು

* ಆಶಾ ಕಾರ್ಯಕರ್ತೆಯರ ಕುರಿತ ಅವೈಜ್ಞಾನಿಕ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು

* ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.

* ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು.

* 2025ರ ಮಾರ್ಚ್ ರಾಜ್ಯ ಬಜೆಟ್‌ನಲ್ಲಿ ಎಲ್ಲ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂ. ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡಬೇಕು.

* ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಿ. ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು.

* ನಗರ ಆಶಾಗಳಿಗೆ 2 ಸಾವಿರ ರೂ ಗೌರವಧನ ಹೆಚ್ಚಿಸಬೇಕು.

* 2025 ಜೂನ್ ಮತ್ತು ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.