ಮಂಡ್ಯ: ಮಾಸಿಕ ಗೌರವನಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಸಂಯುಕ್ತ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತೆಯರು, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಆಶಾ ಕಾರ್ಯಕರ್ತೆಯರು ಹಗಲಿರುಳು ಬಡಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಿ ಕೊಡಲು ಆರೋಗ್ಯ ಇಲಾಖೆಯಲ್ಲಿ ಪರಿಶ್ರಮಿಸುತ್ತಿದ್ದಾರೆ. ಹಳ್ಳಿ ಮತ್ತು ನಗರದ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸಿ ಸಮಗ್ರ ಅಭಿವೃದ್ಧಿಯ ಕುರಿತು ಸಮಾಜದ ಆರೋಗ್ಯಕರ ಬದಲಾವಣೆಗೆ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಹಾಗೆಯೇ ಕೋವಿಡ್-19 ಸಂದರ್ಭದಲ್ಲಿ ಈ ಫ್ರಂಟ್‌ಲೈನ್ ವಾರಿಯರ್ಸ್ ಆಗಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಎಲ್ಲರೂ ಶ್ಲಾಘಿಸಿದ್ದಾರೆಂದರು.
ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲವೆಂಬುದು ವಾಸ್ತವ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಈಗಿರುವ ಆಶಾ ಕಾರ್ಯಕರ್ತೆಯರಿಗೆ ಇರುವ ಗೌರವಧನ ಮತ್ತು ಪ್ರೋತ್ಸಾಹಧನ ಸೇರಿಸಿ ಒಟ್ಟು ರೂ.12000 ಮತ್ತು ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ 3 ಸಾವಿರ ರೂ ಸೇರಿಸಿ ಒಟ್ಟು 15 ಸಾವಿರ ರೂ ಮಾಸಿಕ ಗೌರವಧನ ನಿಗದಿಯಾಗಬೇಕು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಪುಷ್ಪಾವತಿ, ಕಾರ್ಯದರ್ಶಿ ಜ್ಯೋತಿ, ಪಲ್ಲವಿ, ರಾಜಮಣಿ, ಮಂಜುಳಾ, ರಾಣಿ, ಲಕ್ಷ್ಮೀ ಇತರರಿದ್ದರು.