ಜಿಲ್ಲೆ

ನಿಶ್ವಿತ ಗೌರವಧನ ಬಿಡುಗಡೆಗೆ ಆಗ್ರಹ: ಮಂಡ್ಯದಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯಸರ್ಕಾರ ನಿಶ್ಚಿತ ಗೌರವಧನ ಹಾಗೂ ಆಶಾ ನಿಧಿ ಪ್ರೋತ್ಸಾಹ ಧನ ಒಟ್ಟುಗೂಡಿಸಿ ಮಾಸಿಕ 15 ಸಾವಿರ ರೂ ಗೌರವಧನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಮಾವಣೆಗೊಂಡು ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಕಳೆದ ಮೂರು ವರ್ಷದಿಂದ ಪಾವತಿಯಾಗದಿರುವ ಎಎನ್‌ಸಿ, ಪಿಎನ್‌ಸಿ, ಎಂಆರ್1, ಎಂಆರ್2 ಪ್ರೋತ್ಸಾಹ ಧನವನ್ನು ಲೆಕ್ಕಾಚಾರ ಮಾಡಿ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸಂದರ್ಭದಲ್ಲಿ ವಿಶೇಷ ಪ್ರೋತ್ಸಾಹ ಧನ ಹಾಗೂ ಎಂಟಿಎಸ್ ಹಣ ಹಲವರಿಗೆ ನೀಡಲಾಗಿಲ್ಲ. ಈ ಕೂಡಲೇ ಹಣ ಪಾವತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗೌರವಧನ ಕಡಿತ ಮಾಡದೆ ನಿಗದಿತ ಮೊತ್ತವನ್ನು ಪಾವತಿಸಬೇಕು. ಗೌರವಧನ ಇಲ್ಲದೆ ಪರೀಕ್ಷೆ ಮತ್ತು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಬಾರದು. ಗ್ರಾಮೀಣ ಪ್ರದೇಶದಲ್ಲಿ ದೂರದ ಪ್ರದೇಶಕ್ಕೆ ಕೆಲಸಕ್ಕೆ ನಿಯೋಜಿಸಬಾರದು. 2,500 ಜನಸಂಖ್ಯೆಗೆ ಒಬ್ಬ ಕಾರ್ಯಕರ್ತೆಯ ಕೆಲಸ ಸೀಮಿತಗೊಳಿಸಬೇಕು. ಕೇಂದ್ರದ ಪ್ರೋತ್ಸಾಹಧನ ಆರ್‌ಸಿಎಚ್ ಪೋರ್ಟಲ್ಗೆ ಲಿಂಕ್ ಮಾಡಿರುವುದರಿಂದ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ನೀಡಬೇಕು. ಪ್ರೋತ್ಸಾಹ ಧನ ದೊರಕದೆ ಹಲವು ಚಟುವಟಿಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಅನಗತ್ಯವಾಗಿ ಸರ್ವೆ ಹಾಗೂ ಕಾರ್ಯಕ್ರಮಗಳಿಗೆ ಕಾರ್ಯಕರ್ತೆಯರನ್ನು ತೊಡಗಿಸಿಕೊಳ್ಳುವುದನ್ನು ಕೈಬಿಡಬೇಕು. ಪ್ರತಿ ತಿಂಗಳ ಗೌರವಧನ ಮತ್ತು ಪ್ರೋತ್ಸಾಹ ಧನ ಜಮೆ ವೇಳೆ ಯಾವ ತಿಂಗಳಿನದ್ದು ಎಂಬುದನ್ನ ನಮೂದಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿವಾರ ಕಾರ್ಯಕರ್ತೆಯರ ಸಭೆಯಿಂದ ತೊಂದರೆಯಾಗುತ್ತಿರುವುದರಿಂದ ಅದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಎಂ.ಬಿ.ಪುಷ್ಪಾವತಿ, ಕಾರ್ಯದರ್ಶಿ ಜ್ಯೋತಿ, ಸಂಧ್ಯಾ ಇತರರಿದ್ದರು.