ಜಿಲ್ಲೆ

ತುಮಕೂರಿನಲ್ಲಿ ಮುಂದುವರಿದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

Tumakuru

ತುಮಕೂರು: ವಿವಿಧ ಬೇಡಿಕೆ ಈಡೇರಿಸುವಂತೆ ಜು.10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿರುವ ಆಶಾ ಕಾರ್ಯಕರ್ತೆಯರ ಹೋರಾಟ 12ನೇ ದಿನವಾದ ಮಂಗಳವಾರವೂ ಮುಂದುವರಿದಿದೆ.

ಕಳೆದ ವಾರದಿಂದ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಜಿಲ್ಲಾಧಿಕಾರಿ, ತಹಸೀಲ್ದಾರರು ಹಾಗೂ ರಾಜ್ಯದ ಹಲವು ಸಚಿವರು, ಶಾಸಕರಿಗೆ ಖುದ್ದಾಗಿ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದರೂ ಈವರೆಗೆ ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಹೋರಾಟ ಮುಂದುವರಿಸಲಾಗಿದ್ದು ಮಂಗಳವಾರ ಗೂಳೂರು, ಊರ್ಡಿಗೆರೆ, ಹೊನ್ನಹುಡಿಕೆ, ತುಮಕೂರು ನಗರದಲ್ಲೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರೆಸಿದ್ದಾರೆ.

ನಗರದ ಟೌನ್‌ಹಾಲ್ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆರ್‌ಕೆಎಸ್‌ನ ರಾಜ್ಯ ಮಿತಿ ಸದಸ್ಯ ಎಸ್.ಎನ್.ಸ್ವಾಮಿ ಮಾತನಾಡಿ, ಕರೊನಾ ಸೇನಾನಿಗಳಾಗಿ ದುಡಿದ ಆಶಾಕಾರ್ಯಕರ್ತೆಯರಿಗೆ ಸರ್ಕಾರಗಳು ಹೂಮಳೆ ಸುರಿದು, ಗೌರವ ನೀಡಿದರೆ ಸಾಕಾಗದು ಜೀವನವನ್ನು ಗೌರವದಿಂದ ನಡೆಸಲು ಜೀವನ ಯೋಗ್ಯ ವೇತನ ನೀಡುವಂತೆ ಒತ್ತಾಯಿಸಿದರು. ಆಶಾ ಕಾರ್ಯಕರ್ತೆಯರ ಜಿಲ್ಲಾ ಸಂಚಾಲಕರಾದ ಮಂಜುಳಾ ಗೋನವಾರ, ಎಐಎಂಎಸ್‌ಎಸ್ ಜಿಲ್ಲಾ ಅಧ್ಯಕ್ಷ ಎಂ.ವಿ.ಕಲ್ಯಾಣಿ, ಎಐಎಂಎಸ್‌ಎಸ್ ಕಾರ್ಯದರ್ಶಿ ರತ್ನಮ್ಮ, ಎಐಡಿಎಸ್‌ಒ ಅಶ್ವಿನಿ ನೇತೃತ್ವವಹಿಸಿದ್ದರು.