ಬೆಂಗಳೂರು: ಮಾಸಿಕ ಕನಿಷ್ಠ 10 ಸಾವಿರ ರೂ. ಗೌರವಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರುವ ಆಶಾ ಕಾರ್ಯಕರ್ತೆಯರು ಆ.12ರಿಂದ 14ರವರೆಗೆ ರಾಜ್ಯಾದ್ಯಂತ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಕುರಿತು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗೌರವಧನ ಹೆಚ್ಚಳ ಸಂಬಂಧ ಜನವರಿಯಲ್ಲಿ ಪ್ರತಿಭಟನೆ ನಡೆಸಿ, 15 ಸಾವಿರ ರೂ. ನಿಶ್ಚಿತ ಗೌರವಧನ ನಿಗದಿಪಡಿಸಲು ಆಗ್ರಹಿಸಲಾಗಿತ್ತು. ಆಗ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, 2025ರ ಏಪ್ರಿಲ್ನಿಂದ ಪ್ರತಿ ತಿಂಗಳು ಕನಿಷ್ಠ 10 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಬಗ್ಗೆ ಈವರೆಗೂ ಯಾವುದೇ ಆದೇಶ ಹೊರಡಿಸಿಲ್ಲ. ಆದ್ದರಿಂದ ಮತ್ತೆ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಬಜೆಟ್‌ನಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ತಿಂಗಳ ಪ್ರೋತ್ಸಾಹ ಧನ 1 ಸಾವಿರ ರೂ. ಹೆಚ್ಚಿಸಿದಂತೆ, ಆಶಾ ಕಾರ್ಯಕರ್ತೆಯರಿಗೂ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.