ಜಿಲ್ಲೆ

ಸವಲತ್ತು ಕೊಡದೆ ಕರ್ತವ್ಯ ನಿರ್ವಹಣೆ ಹೇಗೆ?

ಶಿವರಾಜ.ಎಂ

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಪೂರಕ ಸವಲತ್ತು ಕೊಡದೆ ಆಶಾ ಕಾರ್ಯಕರ್ತೆಯರನ್ನು ಪ್ರತಿ ಕುಟುಂಬದ ಆರೋಗ್ಯ ಸಮೀಕ್ಷೆ ಕರ್ತವ್ಯಕ್ಕೆ ನಿಯೋಜಿಸಿರುವ ಬಗ್ಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಹಲವು ತಿಂಗಳಿಂದ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರು ಜಿಪಂ ಮೆಟ್ಟಿಲೇರಿದ್ದು, ಸಿಇಒ ಅವರಿಗೆ ಮನವಿ ಪತ್ರ ನೀಡಿ ಸಮಸ್ಯೆ ಬಗೆಹರಿಸುವಂತೆ ಮೊರೆ ಇಟ್ಟಿದ್ದಾರೆ.
ಮೊಬೈಲ್ ಇಲ್ಲ, ಡೇಟಾನೂ ಇಲ್ಲ: ಆರೋಗ್ಯ ಕಾರ್ಯಕರ್ತೆಯರಿಗೆ ಮೊಬೈಲ್‌ನಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ನಡೆಸುವಂತೆ ತರಬೇತಿ ನೀಡಲಾಗಿದೆ, ಮೊಬೈಲ್ ಆ್ಯಪ್ ಮೂಲಕ ಎಲ್ಲವನ್ನೂ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಇದಕ್ಕೆ ಮುಖ್ಯವಾಗಿ ಬೇಕಾಗಿರುವ ಮೊಬೈಲ್‌ಗಳನ್ನೇ ನೀಡಿಲ್ಲ, ಕಾರ್ಯಕರ್ತೆಯರು ಸ್ವಂತ ಮೊಬೈಲ್ ಬಳಕೆ ಮಾಡಿ ಕರ್ತವ್ಯ ನಿರ್ವಹಿಸಬೇಕಿದೆ, ಜತೆಗೆ ಡೇಟಾ ಸಹ ಕೊಡದಿರುವುದರಿಂದ ಅದರ ವೆಚ್ಚವನ್ನೂ ಕಾರ್ಯಕರ್ತೆಯರೇ ಭರಿಸಬೇಕಾಗಿದೆ.
ಅಧಿಕಾರಿಗಳಿಂದ ಧಮಕಿ:
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜವಾಗುತ್ತಿಲ್ಲ. ಬದಲಿಗೆ ಕೆಲಸ ಮಾಡಿದರೆ ಮಾಡಿ, ಇಲ್ಲವಾದರೆ ಕೆಲಸ ಬಿಡಿ ಎಂದು ಧಮಕಿ ಹಾಕುತ್ತಾರೆ. ಏನಾದರೂ ಮಾಡಿಕೊಳ್ಳಿ, ಹೇಳಿದ ಸಮೀಕ್ಷೆ ಮುಗಿಸಿ ಎಂದು ಒತ್ತಡ ಹೇರುತ್ತಾರೆ ಎಂಬುದು ಆಶಾ ಕಾರ್ಯಕರ್ತೆಯರ ಅಳಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರ ಪರಿಸ್ಥಿತಿ ಶೋಚನೀಯವಾಗಿದ್ದು ಎರಡೂ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
2021 ರ ಸರ್ಕಾರದ ಸುತ್ತೋಲೆಯಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಿಎಚ್‌ಸಿಒ ಸಮೀಕ್ಷೆ ನಡೆಸುವಂತೆ ಆದೇಶಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಒತ್ತಾಯ ಪೂರಕವಾಗಿ ಸಮೀಕ್ಷೆ ಮಾಡಲು ತಾಕೀತು ಮಾಡುತ್ತಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಸ್ಮಾರ್ಟ್ ಪೋನ್ ಇಲ್ಲ:
ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರೇ ಆಗಿರುವ ಆಶಾಕಾರ್ಯಕರ್ತೆಯರಲ್ಲಿ ಬಹುತೇಕರು ಸ್ಮಾರ್ಟ್ ಪೋನ್ ಖರೀದಿಸುವ ಪರಿಸ್ಥಿತಿಯಲ್ಲೂ ಇಲ್ಲ. ಕೆಲವರಲ್ಲಿ ಇದ್ದರೂ ಇಲಾಖೆ ನೀಡಿರುವ ಆ್ಯಪ್ ಸಹಕರಿಸುವುದಿಲ್ಲ. ಇಲಾಖೆ ನೀಡಿರುವ ಸಿಮ್‌ನಲ್ಲಿ ನೆಟ್‌ವರ್ಕ್ ಸಿಗುತ್ತಿಲ್ಲ. ಎಲ್ಲವನ್ನೂ ಆಂಗ್ಲ ಭಾಷೆಯಲ್ಲಿ ನಮೂದಿಸಬೇಕಾಗಿದ್ದು ಹಲವರಿಗೆ ಶಿಕ್ಷಣದ ಕೊರತೆ ಇದೆ ಎಂಬ ಅಳಲು ಕೇಳಿಬರುತ್ತಿದೆ.
ಹಕ್ಕೋತ್ತಾಯಗಳೇನು?
ಸರ್ವೇ ನಡೆಸುವ ವೇಳೆ ಆಶಾಕಾರ್ಯಕರ್ತೆಯರೊಂದಿಗೆ ಇನ್ನಿತರ ಆರೋಗ್ಯ ಸಿಬ್ಬಂದಿಯನ್ನು ಕಳುಹಿಸಬೇಕು, ಸಮೀಕ್ಷೆ ಮಾಡಲು ಶಕ್ತರಿರುವವರಿಗೆ ಸೂಕ್ತ ಮೊಬೈಲ್ ನೀಡಿ ಡೇಟಾ ನೀಡಬೇಕು, ಜತೆಗೆ ಮತ್ತಷ್ಟು ತರಬೇತಿ ನೀಡಬೇಕಿದೆ. ಸ್ಮಾರ್ಟ್ ಪೋನ್ ಬಳಕೆ ಬಗ್ಗೆ ತಿಳಿಯದವರಿಗೆ ಪರ್ಯಾಯ ಕರ್ತವ್ಯಕ್ಕೆ ನಿಯೋಜಿಸಬೇಕು. ಜನರಲ್ಲಿ ಸಮೀಕ್ಷೆ ಬಗ್ಗೆ ಅರಿವು ಮೂಡಿಸಬೇಕು, ಜತೆಗೆ ಮಾಡುತ್ತಿರುವ ಕರ್ತವ್ಯಕ್ಕೆ ಸರಿಯಾದ ಸಂಭಾವನೆ ನಿಗದಿ ಮಾಡಬೇಕು ಎಂಬುದು ಆಶಾ ಕಾರ್ಯಕರ್ತೆಯರ ಹಕ್ಕೋತ್ತಾಯವಾಗಿದೆ.