ಪ್ರಕಾಶ್ ಮಂಜೇಶ್ವರ ಮಂಗಳೂರು
ದಲಿತ ಯುವಜನರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸುವ ಸಂಸ್ಥೆಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಎರಡು ವರ್ಷ ಹಿಂದೆ ಘೋಷಿಸಿದ್ದ ‘ಆಶಾದೀಪ’ ಯೋಜನೆಯು ಈ ವರ್ಷ ಜಾರಿಯಾಗಿದೆ.
ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರನ್ನು ಕಾಯಂ ಕೆಲಸಗಾರರಾಗಿ ನೇಮಿಸಿಕೊಳ್ಳುವ ಮಾಲೀಕರ ಪಾಲಿನ ಭವಿಷ್ಯ ನಿಧಿ ಹಾಗೂ ಕಾರ್ಮಿಕರ ರಾಜ್ಯ ವಿಮಾ (ಇಎಸ್‌ಐ) ವಂತಿಕೆಗಳನ್ನು ನೇಮಕ ಮಾಡಿದ ಮೊದಲ ಎರಡು ವರ್ಷಗಳ ತನಕ ಹಾಗೂ ಗುತ್ತಿಗೆ ಕಾರ್ಮಿಕರಾಗಿ ನೇಮಕಗೊಂಡ ಕಾರ್ಮಿಕರ ಒಂದು ವರ್ಷ ತನಕದ ವಂತಿಕೆಯನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ಸರ್ಕಾರ ಮರು ಪಾವತಿಸಲಿದೆ.
ದಕ್ಷಿಣ ಕನ್ನಡದಲ್ಲಿ ವಿವಿಧ ಕೈಗಾರಿಕೆ ಸಂಸ್ಥೆ ಸಂಘಟನೆಗಳಿಗೆ ಈ ಬಗ್ಗೆ ಮಾಹಿತಿ ಒದಗಿಸಲಾಗಿದೆ. ವಾರದೊಳಗೆ ಈ ಬಗ್ಗೆ ಜಿಲ್ಲೆಯ ಉದ್ಯೋಗದಾತ ಸಂಸ್ಥೆಗಳಿಂದ ಮಾಹಿತಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಇರುವುದಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
2017-18ನೇ ಸಾಲಿನ ಆಯವ್ಯಯದಲ್ಲಿ ಆಶಾದೀಪ ಯೋಜನೆ ಘೋಷಿಸಲಾಗಿತ್ತು. ಅನುದಾನ ವಿಳಂಬದಿಂದಾಗಿ ಯೋಜನೆಯೂ ವಿಳಂಬವಾಗಿದೆ. ಆರು ತಿಂಗಳ ಹಿಂದೆಯಷ್ಟೇ ಅನುದಾನ ಬಿಡುಗಡೆಯಾಗಿದೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 1960ರ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆಯಡಿ ಕರ್ನಾಟಕ ಸ್ಟೇಟ್ ವರ್ಕರ್ಸ್ ವೆಲ್ಫೇರ್ ಆ್ಯಂಡ್ ಸೋಷಿಯಲ್ ಸೆಕ್ಯೂರಿಟಿ (ಆಶಾದೀಪ ಯೋಜನೆ) ಸೊಸೈಟಿಯನ್ನು ನೊಂದಾಯಿಸಲಾಗಿದೆ.
ಇದು ಪ.ಜಾತಿ ಮತ್ತು ಪ. ಪಂಗಡದ ಯುವಜನರಿಗೆ ಉದ್ಯೋಗ ಒದಗಿಸುವ ಖಾಸಗಿ ಸಂಸ್ಥೆ ಮಾಲೀಕರಿಗೆ ಇರುವ ಯೋಜನೆಯಾಗಿದ್ದರೂ, ಇಲ್ಲಿನ ಖಾಸಗಿ ಸಂಸ್ಥೆಗಳ ಮಾಲೀಕರು ಹೆಚ್ಚು ಆಸಕ್ತಿ ವಹಿಸಿದಂತೆ ಕಂಡುಬಂದಿಲ್ಲ. ಇಡೀ ರಾಜ್ಯದ ಪರಿಸ್ಥಿತಿಗೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಫಲಿತಾಂಶ ದೊರೆತಿರುವುದಾಗಿ ಇಲಾಖೆ ಮೂಲ ತಿಳಿಸಿದೆ. ಸರ್ಕಾರದ ಎಲ್ಲ ಇಲಾಖೆಗಳು ಖಾಸಗೀಕರಣಗೊಳ್ಳುತ್ತಿರುವ ಸಂದರ್ಭ ಮೀಸಲಾತಿಯೇ ಮಹತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯೋಗ ಅವಕಾಶಗಳು ಸೀಮಿತಗೊಳ್ಳುತ್ತಿದ್ದು, ಪ್ರಸ್ತಾವಿತ ಹೊಸ ಯೋಜನೆ ಈ ಕೊರತೆ ತುಂಬಲು ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎಂದು ಕಾದುನೋಡಬೇಕು.
‘ಆಶಾ ದೀಪ’ ಯೋಜನೆ ಜಾರಿ ಸಂಬಂಧಿಸಿ ದಕ್ಷಿಣ ಕನ್ನಡದ ವಿವಿಧ ಕೈಗಾರಿಕಾ ಸಂಸ್ಥೆಗಳಿಗೆ ಮಾಹಿತಿ ಒದಗಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಕೈಗಾರಿಕೆ, ಉದ್ದಿಮೆ ವಲಯದ ಹೆಚ್ಚಿನ ಮಾಲೀಕರು ಈ ಬಗ್ಗೆ ಆಸಕ್ತಿ ಹೊಂದಿಲ್ಲ. ಯೋಜನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. 2019, ಏಪ್ರಿಲ್ 1ರ ಬಳಿಕ ನೇಮಕಗೊಂಡ ಕಾರ್ಮಿಕರಿಗೆ ಮಾತ್ರ ಯೋಜನೆ ಅನ್ವಯ. - ನಾಗರಾಜ್, ಸಹಾಯಕ ಕಾರ್ಮಿಕ ಆಯುಕ್ತರು, ದ.ಕ.