ಚನ್ನಮ್ಮ ಕಿತ್ತೂರು ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಶಾಸಕ ಮಹಾಂತೇಶ ದೊಡಗೌಡರ ಪ್ರೋತ್ಸಾಹ ಧನ ವಿತರಿಸಿದರು. ಡಾ.ವಿ.ಕೆ.ಜೋಶಿ, ಸಂದೀಪ ದೇಶಪಾಂಡೆ, ಬಸನಗೌಡ ಸಿದ್ರಾಮಣಿ, ಉಳವಪ್ಪ ಉಳ್ಳಾಗಡ್ಡಿ, ಚಿನ್ನಪ್ಪ ಮುತ್ನಾಳ ಇತರರು ಇದ್ದರು. 
ಜಿಲ್ಲೆ

ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ

ಚನ್ನಮ್ಮನ ಕಿತ್ತೂರು: ದೇಶದಲ್ಲಿ ತಲೆದೋರಿರುವ ಕರೊನಾ ನಿಯಂತ್ರಿಸುವಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಿತ್ತೂರು ತಾಲೂಕಿನ ಆಶಾ ಕಾಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಶಾ ಕಾಯಕರ್ತೆಯರು ಸ್ವಯಂ ರಕ್ಷಣೆಗೆ ಆದ್ಯತೆ ನೀಡಿ ಕರೊನಾ ರೋಗಿಗಳ ಸೇವೆ ಸಜ್ಜಾಗಬೇಕು.

ಸಮಾಜದಲ್ಲಿ ಎಲ್ಲರೂ ಅವರಿಗೆ ಗೌರವ ನೀಡಬೇಕು ಎಂದರು. ಕೆಎಂಎಫ್ ಉಪ ವ್ಯವಸ್ಥಾಪಕ ಡಾ.ವಿ.ಕೆ.ಜೋಶಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಕರೊನಾ ಹಿಮ್ಮೆಟ್ಟಿಸಲು ಹಗಲು-ರಾತ್ರಿ ಸೇವೆಯಲ್ಲಿ ನಿರತರಾಗಿರುವುದು ಗೌರವದ ಸಂಗತಿಯಾಗಿದೆ. ರೋಗ ಹಂತ-ಹಂತವಾಗಿ ನಿಯಂತ್ರಣಕ್ಕೆ ಒಳಪಡುತ್ತಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಡೇರಿಯವರು ಹಾಲಿನಲ್ಲಿ ಕಲಬೆರಕೆ ಮಾಡಲು ಕಾಸ್ಟಿಕ್ ಸೋಡಾ ಹಾಕುತ್ತಿದ್ದು, ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಕಲಬೆರಕೆ ಇಲ್ಲದ ನಂದಿನಿ ಹಾಲನ್ನೇ ಬಳಸುವಂತೆ ಎಲ್ಲ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದಲ್ಲಿ ಪ್ರಚಾರಪಡಿಸಬೇಕು ಎಂದು ಮನವಿ ಮಾಡಿದರು. ಬಸವರಾಜ ಪರವಣ್ಣವರ ಮಾತನಾಡಿದರು. ಸಂದೀಪ ದೇಶಪಾಂಡೆ, ಬಸನಗೌಡ ಸಿದ್ರಾಮಣಿ, ಉಳವಪ್ಪ ಉಳ್ಳಾಗಡ್ಡಿ, ಚಿನ್ನಪ್ಪ ಮುತ್ನಾಳ, ಬಸವರಾಜ ಕೊಳದೂರ ಇತರರು ಇದ್ದರು.

ಖಾನಾಪುರ ವರದಿ: ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ಈಚೆಗೆ ಕೊಡಚವಾಡ ಗ್ರಾಪಂ ವ್ಯಾಪ್ತಿಯ ಕರೊನಾ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಕೊಡಚವಾಡ ಗ್ರಾಪಂ ವ್ಯಾಪ್ತಿಯ ಕೊಡಚವಾಡ, ಅವರೊಳ್ಳಿ, ಬಿಳಕಿ, ಕಗ್ಗಣಗಿ, ಚಿಕ್ಕದಿನಕೊಪ್ಪ ಮತ್ತು ದೇಮಿನಕೊಪ್ಪ ಗ್ರಾಮಗಳಲ್ಲಿ ರೋಗ ಹರಡದಂತೆ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಜ್ಯೋತಿಬಾ ಭರಮಪ್ಪನವರ ಸನ್ಮಾನಿಸಿದರು. ಆರೋಗ್ಯ ಸಹಾಯಕಿ ಎಂ.ಸುಶೀಲಮ್ಮ, ಪಿಕೆಪಿಎಸ್ ಅಧ್ಯಕ್ಷ ಯಶವಂತ ಕೊಡೊಳಿ, ಗ್ರಾಪಂ ಸದಸ್ಯ ರಾಜಗೌಡ ಪಾಟೀಲ, ಶಿಕ್ಷಕ ರವಿ ಡುಕರಿ, ಯಲ್ಲಪ್ಪ ನಾಗಣ್ಣವರ ಇತರರು ಇದ್ದರು.