ಬೆಳಗಾವಿ: ಪ್ರೋತ್ಸಾಹಧನ ಬಾಕಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಮಂಗಳವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು 15 ತಿಂಗಳಿಂದ ಆಶಾ ಕಾರ್ಯಕರ್ತೆಯರ ಟಿಎಂಸಿಯ ಪ್ರೋತ್ಸಾಹ ಧನ ನೀಡಿಲ್ಲ. ಈ ವಿಚಾರವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಪಾವತಿಸುವ ಬಗ್ಗೆ ಇಲಾಖೆ ನೀಡಿರುವ ಭರವಸೆ ಹುಸಿಯಾಗಿವೆ. ಹೀಗಾಗಿ ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರು ತಮ್ಮ ಕೆಲಸ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಜತೆಗೆ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೂ ತಾತ್ಕಾಲಿಕ ತಡೆ ಹಾಕಿದ್ದೇವೆ. ಶೀಘ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ತೀವ್ರ ಹೋರಾಟ ನಡೆಸಬೇಕಾಗತ್ತದೆ ಎಂದು ಎಚ್ಚರಿಸಿದರು. ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗಣ್ಣವರ, ಕಾರ್ಯದರ್ಶಿ ಗೀತಾ ರಾಯಗೋಳ, ಭಾರತಿ ಮಾಶ್ಯಾಳ, ಲತಾ ಜಾಧವ, ಸುಜಾತಾ ಕುಂಬಾರ, ಶೈಲಾ ಚಿಕ್ಕೋಡಿ, ಜಯಶ್ರೀ ನಾವಿ, ರೂಪಾ ಅಂಗಡಿ, ಗಂಗಮ್ಮ ಬೈಲಹೊಂಗಲ, ಸರೋಜಾ ಅಂಗಡಿ ಇತರರಿದ್ದರು.