ತಿಪಟೂರು: ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ 4,685 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದ ವಿವಿಧ ಬೆಳೆಗಳಿಗೆ ನಂಜಾಣು (ಬೂದಿ) ರೋಗ ಹರಡಿ ರೈತರನ್ನು ಕಂಗಾಲಾಗಿಸಿದೆ.
ಕಸಬಾ ಹೋಬಳಿಯಲ್ಲಿ 750, ಕಿಬ್ಬನಹಳ್ಳಿ 350, ನೊಣವಿನಕೆರೆ 680 ಹಾಗೂ ಹೊನ್ನವಳ್ಳಿ ಹೋಬಳಿಯಲ್ಲಿ 2,905 ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆ ಮಾಡಲಾಗಿತ್ತು.
ಸಕಾಲದಲ್ಲಿ ಮಳೆ ಆದರೂ, ನಂತರ ಸುರಿದ ನಿರಂತರ ಮಳೆಗೆ ಬೆಳೆ ರೋಗಕ್ಕೆ ತುತ್ತಾಗಿದೆೆ. ರೋಗ ನಿಯಂತ್ರಣಕ್ಕೆ ಬಳಸಲಾಗಿದ್ದ ಇಮಿಡಾಕ್ಲೋಫ್ರಿಡ್ ಔಷಧ ಮಳೆಯಲ್ಲಿ ಕೊಚ್ಚಿ ಹೋಗಿದೆ. ಹೊನ್ನವಳ್ಳಿ, ರಟ್ಟೇನಹಳ್ಳಿ, ಹಾನವಾಳ, ವಿಠಲಾಪುರ, ಹಾಲ್ಕುರಿಕೆ, ಸಾರ್ಥವಳ್ಳಿ, ಗುಡಿಗೊಂಡನಹಳ್ಳಿ, ತಿಮ್ಲಾಪುರ, ವಾಸುದೇವರಹಳ್ಳಿ, ಮುದ್ದೇನಹಳ್ಳಿ ಸೇರಿ ಇತರ ಗ್ರಾಮಗಳಲ್ಲಿ ಅತೀ ಹೆಚ್ಚು ಹೆಸರು ಕಾಳು ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಮಾಡಿದ ಹೆಸರುಕಾಳು ಮನೆ ಬಳಕೆಗೂ ಸಿಗದಂತಾಗಿದೆ.
ಇಲಾಖೆ ಲೆಕ್ಕದಲ್ಲಿ ಎಕರೆಗೆ 52 ಕಿಲೋ ಇಳುವರಿ: ತಾಲೂಕು ಕೃಷಿ ಇಲಾಖೆ ಆಯ್ದ 20 ಗ್ರಾಮಗಳಲ್ಲಿ ನಡೆಸಿದ ಬೆಳೆ ಕಟಾವು ಪ್ರಯೋಗ (ಸಿಸಿಇ) ಲಿತಾಂಶದ ಪ್ರಕಾರ ಹೆಸರು ಕಾಳು ಇಳುವರಿ ಪ್ರತೀ ಎಕರೆಗೆ ಸರಾಸರಿ 52.9 ಕಿಲೋ ಎಂದು ಸರ್ಕಾರಕ್ಕೆ ವರದಿ ನೀಡಿದೆ. ಅಂದರೆ, ಆಯ್ದ ಸರ್ವೇ ನಂಬರ್‌ಗಳಲ್ಲಿ 5 ಮೀಟರ್ ಉದ್ದ, 5 ಮೀಟರ್ ಅಗಲ ವ್ಯಾಪ್ತಿಯ ಜಮೀನಿನಲ್ಲಿ ಬೆಳೆದಿದ್ದ ಹೆಸರು ಕಾಳು ಪೈರನ್ನು ಕಟಾವು ಮಾಡಿ (ಸಿಸಿಇ ಪರೀಕ್ಷೆ ) ವರದಿ ನೀಡಲಾಗಿದೆ. ಈ ಪ್ರಯೋಗದನ್ವಯ 5 ಗುಂಟೆ ಜಾಗದಲ್ಲಿ 500 ರಿಂದ 600 ಗ್ರಾಂ ಹೆಸರು ಕಾಳು ಬೆಳೆ ಇಳುವರಿ ಆಗಿದೆ ಎಂದು ಲೆಕ್ಕ ಹಾಕಲಾಗಿದೆ.
ಬೆಳೆ ವಿಮೆ ಸಿಗುವುದೂ ಕಷ್ಟ: 5 ಗುಂಟೆ ಜಾಗದಲ್ಲಿ ಒಂದೂವರೆ ಕಿಲೋಗಿಂತ ಹೆಚ್ಚು ಇಳುವರಿ ಆಗಿದ್ದರೆ ಬೆಳೆ ವಿಮೆ ಸಿಗುವುದು ಕಷ್ಟ ಎನ್ನಲಾಗಿದೆ. 2021ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಸಿಸಿಇ ಪರೀಕ್ಷೆಯಲ್ಲಿ ಅಧಿಕ ಇಳುವರಿ ದಾಖಲಾದ ಕಾರಣ ಯಾವ ರೈತರಿಗೂ ಹೆಸರು ಕಾಳು ಬೆಳೆಗೆ ವಿಮೆ ಪರಿಹಾರ ಸಿಕ್ಕಿಲ್ಲ. ಉಳಿದ ಹೋಬಳಿಯ ರೈತರಿಗೆ ಪ್ರತಿ ಎಕರೆಗೆ 11,600 ರೂಪಾಯಿಯಂತೆ ಒಟ್ಟು 9.25 ಕೋಟಿ ರೂಪಾಯಿ ಪರಿಹಾರ ದೊರೆತಿದೆ.
ತಾಲೂಕಿನ 20 ಆಯ್ದ ಗ್ರಾಮಗಳು ಮತ್ತು ನಿಗದಿ ಮಾಡಿದ ಸರ್ವೇ ನಂಬರ್‌ಗಳಲ್ಲಿ ಬೆಳೆ ಕಟಾವು ಪರೀಕ್ಷೆ (ಸಿಸಿಇ) ನಡೆಸಲಾಗಿದೆ. ಪ್ರತೀ ಎಕರೆಗೆ ಸರಾಸರಿ 52,900 ಗ್ರಾಂ ಹೆಸರು ಕಾಳು ಇಳುವರಿ ಕಂಡುಬಂದಿದೆ. ಹಿಂದಿನ 5 ವರ್ಷಗಳ ಇಳುವರಿ ಸರಾಸರಿ ಲೆಕ್ಕದಲ್ಲಿ ವಿಮೆ ಪರಿಹಾರ ನಿಗದಿ ಮಾಡಲಾಗುತ್ತೆ. ತಾಲೂಕಿನ ಒಟ್ಟು 26,910 ರೈತರು ಹೆಸರು ಕಾಳು ಬೆಳೆಗೆ ವಿಮೆ ಮಾಡಿಸಿದ್ದಾರೆ.
ಎಚ್.ಚನ್ನಕೇಶವಮೂರ್ತಿ ಸಹಾಯಕ ಕೃಷಿ ನಿರ್ದೇಶಕ
ಪ್ರತಿ ಎಕರೆಯ ಒಂದು ಸಾಲಿಗೆ 7 ರಿಂದ 8 ಸಾವಿರ ಖರ್ಚು ಬರುತ್ತದೆ. ಈ ಬಾರಿ ಬಿತ್ತಿದ ಪೈರು ಕಾಳುಕಟ್ಟುವ ಸಮಯದಲ್ಲಿ ಮಳೆಗೆ ತೊಯ್ದು ರೋಗಕ್ಕೆ ತುತ್ತಾಗಿದೆ. ದನಕರುಗಳಿಗೆ ಮೇವಾದರೂ ಆಗುತ್ತೆ ಎಂದರೆ ಹೆಸರು ಗಿಡಗಳು ಕೊಳೆತಿವೆ. ಆಯ್ದ ಕೆಲ ಭಾಗದಲ್ಲಿ ಬೆಳೆ ಚೆನ್ನಾಗಿದೆ ಎಂದ ಮಾತ್ರಕ್ಕೆ ಇದನ್ನೇ ಮಾನದಂಡವಾಗಿಸಿ, ಬೆಳೆೆ ವಿಮೆ ನಿರಾಕರಿಸುವುದು ಸರಿಯಲ್ಲ.
ಟಿ.ಸಿ.ಹರೀಶ್ ರೈತ ತಿಮ್ಲಾಪುರ