ಹರಪನಹಳ್ಳಿಗೆ ಸೋಮವಾರ ಆಗಮಿಸಿದ್ದ ಸನ್ಯಾಸ ದೀಕ್ಷೆ ಸ್ವೀಕರಿಸಲಿರುವ ವಿಜಯಪುರದ ಪಾಯಲ್ ಪಾರಿಕ್. 
ಜಿಲ್ಲೆ

ಸನ್ಯಾಸ ದೀಕ್ಷೆಗೆ ಮುಂದಾದ ವಿಜಯಪುರದ ಯುವತಿ: ಹರಪನಹಳ್ಳಿಯಲ್ಲಿ ಪಾಯಲ್ ಪಾರಿಕ್‌ಗೆ ಜೈನ ಗುರುಗಳ ಆದೇಶ

ಹರಪನಹಳ್ಳಿ: ವಿಜಯಪುರ ಜಿಲ್ಲೆಯ ಜೈನ ಸಮುದಾಯದ ಯುವತಿ ಸನ್ಯಾಸ ದೀಕ್ಷೆಗೆ ಮುಂದಾಗಿದ್ದಾರೆ. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಯಲ್ ಕುಮಾರಿ ಪಾರಿಕ್ ಸನ್ಯಾಸ ದೀಕ್ಷೆ ಸ್ವೀಕರಿಸಲು ಜೈನ ಗುರುಗಳಿಂದ ಆದೇಶ ಪಡೆದರು.

ವಿಜಯಪುರದ ನರೇಂದ್ರ ಕುಮಾರಜೀ, ವೈಜಯಂತಿ ಪಾರಿಕ್ ದಂಪತಿ ಪುತ್ರಿ 19 ವರ್ಷದ ಪಾಯಲ್ ಕುಮಾರಿ ಪಾರಿಕ್ ಭವ್ಯ ಮೆರವಣಿಗೆಯಲ್ಲಿ ಪಟ್ಟಣಕ್ಕೆ ಆಗಮಿಸಿ ರಸ್ತೆ ಮಾರ್ಗದಲ್ಲಿ ಜನರಿಗೆ ಆಹಾರ ಸೇರಿ ಇತರ ವಸ್ತುಗಳನ್ನು ದಾನ ಮಾಡಿದರು. ಬಳಿಕ ಕಲ್ಯಾಣ ಮಂಟಪದಲ್ಲಿ ರಾಷ್ಟ್ರ ಸಂತ ಗುರಗಳಾದ ನರೇಶ ಮುನೀಜಿ ಮಹಾರಾಜ, ಸೌಲಿಭದ್ರಜೀ ಮಹಾರಾಜ, ಚಂದನ್ ಬಾಲಾಜಿ ಮಹಾರಾಜ, ದೇವೇಂದ್ರ ಪ್ರಭಾಜಿ ಮಹಾರಾಜ, ಧರ್ಮ ಜ್ಯೋತಿ ಮಹಾರಾಜ, ಯುವತಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಲು ಆದೇಶ ನೀಡಿದರು.

ಜೈನ ಸಮುದಾಯದ ಅಧ್ಯಕ್ಷ ಧನರಾಜ್ ಜೈನ, ಉಪಾಧ್ಯಕ್ಷ ಸುಮೇರಿಮಲ್ ಜೈನ್, ಮಹಾವೀರ ಕುಮಾರ, ಅಶೋಕ ಕುಮಾರ, ಕಾಂತಿಲಾಲ್ ಜೈನ, ಉತ್ತಮ ಚಂದ್ ಜೈನ್, ಗೌತಮ್ ಚಂದ್, ಮಹಾವೀರ ಭಂಡಾರಿ, ಮಹಾವೀರ ಬನ್ಸಿಲಾಲ್, ಹನುಮಾನ ಚಂದ್, ಗಣಪತಿ ರಾಜ್ ಜೈನ, ಸಂದೀಪ, ವಿಜಯರಾಜ್ ಸೇರಿ ಸಮುದಾಯ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.