ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿ ಹಾಗೂ ಪವಿತ್ರ ಕ್ಷೇತ್ರ ಶ್ರೀಭಗಂಡೇಶ್ವರ ದೇವಾಲಯಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮತ್ತು ಕುಟುಂಬದವರು ಮಂಗಳವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಎ.ಎಸ್.ಪೊನ್ನಣ್ಣ ಅವರ ೫೦ನೇ ಜನ್ಮ ದಿನದ ಪ್ರಯುಕ್ತ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ಬಳಿಕ ಮಹಾ ಗಣಪತಿ ದೇವಾಲಯದಲ್ಲಿ ಪೂಜೆ, ನಂತರ ಶ್ರೀಭಗಂಡೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಪ್ರಾರ್ಥನೆ, ನಂತರ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಾಡಿನಲ್ಲಿ ಮತ್ತಷ್ಟು ಮಳೆ ಬೆಳೆಯಾಗಿ ಕೃಷಿಕರು ಸೇರಿದಂತೆ ಎಲ್ಲರಲ್ಲಿ ಸಮೃದ್ಧಿ, ಸಂತಸ ತರುವಂತಾಗಲಿ ಎಂದು ಪ್ರಾರ್ಥಿಸಿದರು. ಬಳಿಕ ಶ್ರೀಮಹಾವಿಷ್ಣು ದೇವರಲ್ಲಿ ಪೂಜೆ ಸಲ್ಲಿಸಿದ ನಂತರ ಸುಬ್ರಮಣ್ಯ ದೇವರಲ್ಲಿ ಪ್ರಾರ್ಥಿಸಿ ಕಲ್ಲುಸಕ್ಕರೆಯ ತುಲಾಭಾರ ನೆರವೇರಿಸಿದರು.
ಅರ್ಚಕರಾದ ಹರೀಶ್ ಭಟ್ ಅವರು ವಿಶೇಷ ಪೂಜೆ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ತಕ್ಕ ಮುಖ್ಯಸ್ಥರಾದ ಬೊಳ್ಳಡ್ಕ ಅಪ್ಪಾಜಿ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಪ್ರಮುಖರಾದ ನೆರವಂಡ ಉಮೇಶ್, ಇಸ್ಮಾಯಿಲ್, ಕರಿಕೆ ರಾಮನಾಥ್, ಲವಚಿಣ್ಣಪ್ಪ ಇತರರು ಇದ್ದರು.
ಬಳಿಕ ತಲಕಾವೇರಿಗೆ ತೆರಳಿ ಸಂಕಲ್ಪ ಪೂಜೆ ಮಾಡಿ, ತುಲಾಭಾರ ನೆರವೇರಿಸಿ ವಿಶೇಷ ಪ್ರಾರ್ಥನೆಯನ್ನು ಶಾಸಕ ಪೊನ್ನಣ್ಣ ಸಲ್ಲಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಜನ್ಮ ದಿನದ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ಕುಟುಂಬ ಸದಸ್ಯರ ಜತೆಗೂಡಿ ತಾಯಿ ಕಾವೇರಿ ಮಾತೆ ಹಾಗೂ ಶ್ರೀ ಭಗಂಡೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗಿದೆ. ನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಎಲ್ಲರಲ್ಲಿ ಸಂತಸ, ಸಮೃದ್ಧಿ ತರುವಂತಾಗಲಿ ಎಂದು ಪ್ರಾರ್ಥಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಮನೆ, ರಸ್ತೆ, ಸೇತುವೆ ಹಾನಿ ಬಗ್ಗೆ ಮುಖ್ಯಮಂತ್ರಿ ಅವರು, ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಲ್ಲಿ ಗಮನ ಸೆಳೆಯಲಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದರು.
ಕಾಡಾನೆ ಮತ್ತು ಮಾನವ ಸಂಘರ್ಷ ತಪ್ಪಿಸುವಲ್ಲಿ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಆ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣ ಮಾಡಲಾಗುವುದು. ರ‌್ಯಾಪಿಡ್ ರ‌್ಯಾಸ್ಪನ್ಸ್ ತಂಡವನ್ನು ಮತ್ತಷ್ಟು ಬಲಪಡಿಸಲಾಗುವುದು. ಈ ಸಂಬಂಧ ಅರಣ್ಯ ಸಚಿವರ ಜತೆಗೂ ಚರ್ಚಿಸಲಾಗಿದೆ ಎಂದು ಪೊನ್ನಣ್ಣ ಮಾಹಿತಿ ನೀಡಿದರು.
ಭಾಗಮಂಡಲ ಬಳಿಯ ಚೇರಂಬಾಣೆ ವ್ಯಾಪ್ತಿಯಲ್ಲಿನ ಸೇತುವೆ ಸರಿಪಡಿಸಲಾಗುವುದು, ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯನ್ನು ಹೆಚ್ಚಿಸುವಲ್ಲಿ ೬೬/೧೧ ಸಾಮರ್ಥ್ಯದ ೭ ವಿದ್ಯುತ್ ಉಪ ಘಟಕ ನಿರ್ಮಾಣ ಮಾಡಲು ಮುಂದಾಗಲಾಗಿತ್ತು. ಆದರೆ ಭವಿಷ್ಯದಲ್ಲಿ ಮತ್ತಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗುವುದರಿಂದ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉಪ ಘಟಕ ನಿರ್ಮಾಣ ಮಾಡಲಾಗುವುದು. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ ಎಂದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಗ್ರಾಮ ಯೋಜನೆಯಡಿ ಗ್ರಾಮೀಣ ಪ್ರದೇಶದಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲಾಗಿದೆ. ಈ ಸಂಬಂಧ ಡಿಪಿಆರ್ ಸಿದ್ಧವಾಗಿದೆ ಎಂದು ಎ.ಎಸ್.ಪೊನ್ನಣ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಇತರರಿದ್ದರು.