ಜಿಲ್ಲೆ

ವಿಶ್ವ ಪರಿಸರ ದಿನದ ಅಂಗವಾಗಿ ಓರಾಯನ್ ಮಾಲ್‌ನಲ್ಲಿ 25 ಅಡಿ ಇ-ವೇಸ್ಟ್ ಮ್ಯೂರಲ್ ಸ್ಥಾಪನೆ

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯುನ್ಮಾನ ತ್ಯಾಜ್ಯ (ಇ-ವೇಸ್ಟ್) ಕುರಿತ ಜಾಗೃತಿ ಮೂಡಿಸಲು ಓರಾಯನ್ ಮಾಲ್ ಬ್ರಿಗೇಡ್ ಗೇಟ್‌ವೇನಲ್ಲಿ 25 ಅಡಿ ಎತ್ತರದ ಇ-ವೇಸ್ಟ್ ಮ್ಯೂರಲ್ (ವಿದ್ಯುನ್ಮಾನ ತ್ಯಾಜ್ಯಗಳಿಂದ ರೂಪಿಸಿದ ಭಿತ್ತಿಚಿತ್ರ) ರೂಪಿಸಿದೆ.

ಇ-ವೇಸ್ಟ್ ಕಲಾಕೃತಿಗಳನ್ನು ರಚಿಸುವಲ್ಲಿ ವಿಶೇಷ ಪರಿಣತಿ ಹೊಂದಿರುವ ಖ್ಯಾತ ಕಲಾವಿದ ದಾವಣಗೆರೆಯ ವಿಶ್ವನಾಥ್ ಮಲ್ಲಬಾಡಿ ಅವರು ಈ ಕಲಾಕೃತಿಯನ್ನು ರಚಿಸಿದ್ದಾರೆ. ಕೀಬೋರ್ಡ್‌ಗಳು, ರಿಮೋಟ್ ಕಂಟ್ರೋಲ್‌ಗಳು, ಇಂಟರ್‌ನೆಟ್ ಕೇಬಲ್‌ಗಳು, ಎಕ್ಸಿಟ್ ಫ್ಯಾನ್‌ಗಳು, ವಿಡಿಯೋ ಕಾನ್ಫೆರೆನ್ಸ್ ಉಪಕರಣಗಳು, ಕ್ಯಾಸೆಟ್‌ಗಳು, ವೈಯರ್‌ಲೆಸ್ ಫೋನ್‌ಗಳು, ಸಿಡಿ, ಡಿವಿಡಿ ಮುಂತಾದ ಇ-ವೇಸ್ಟ್‌ಗಳಿಂದ ಈ ಬೃಹತ್ ಕಲಾಕೃತಿಯನ್ನು ನಿರ್ಮಿಸಲಾಗಿದೆ.

ಮುಂದಿನ ಒಂದು ವರ್ಷದವರೆಗೆ ಈ ಕಲಾಕೃತಿ ಮಾಲ್‌ನಲ್ಲಿ ಖಾಯಂ ಆಗಿ ಇರಲಿದೆ. ಈ ಕಲಾಕೃತಿ ರಚನೆಗಾಗಿ ಕಳೆದ ಎರಡು ತಿಂಗಳಿಂದ ವಿಶೇಷ ಅಭಿಯಾನ ನಡೆಸಿ ಓರಾಯನ್ ಮಾಲ್‌ಗಳಿಂದ ಇ-ವೇಸ್ಟ್ ಸಂಗ್ರಹಿಸಲಾಗಿತ್ತು.

ವರ್ಷ ಪೂರ್ತಿ ಇ-ವೇಸ್ಟ್ ಸಂಗ್ರಹ

ನಗರದಲ್ಲಿ ಹೆಚ್ಚುತ್ತಿರುವ ವಿದ್ಯುನ್ಮಾನ ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸಲು ಬ್ರಿಗೇಡ್ ಗ್ರೂಪ್ ಮುಂದಾಗಿದೆ. ವಿದ್ಯುನ್ಮಾನ ತ್ಯಾಜ್ಯ ಮರುಬಳಕೆಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ ಹೊಂದಿರುವ ಝೊಲೋಪಿಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬ್ರಿಗೇಡ್ ಗ್ರೂಪ್, ಇ-ವೇಸ್ಟ್ ಸಂಗ್ರಹಕ್ಕೆ ಶಾಶ್ವತ ಘಟಕ ಸ್ಥಾಪಿಸಿದೆ.

ಪರಿಸರ ಪ್ರಜ್ಞೆಯನ್ನು ಪೋಷಿಸಲು ವರ್ಷಪೂರ್ತಿ ವಿದ್ಯುನ್ಮಾನ ತ್ಯಾಜ್ಯ ಸಂಗ್ರಹಣೆಗೆ ಅವಕಾಶ ಮಾಡಿಕೊಡಲು ಓರಾಯನ್ ಮಾಲ್‌ಗಳಲ್ಲಿ ಶಾಶ್ವತ ಇ-ವೇಸ್ಟ್ ಸಂಗ್ರಹ ಘಟಕವನ್ನು ಸ್ಥಾಪಿಸಿರುವುದಾಗಿ ಬ್ರಿಗೇಡ್ ಗ್ರೂಪ್‌ನ ರಿಟೇಲ್ ವಿಭಾಗದ ಉಪಾಧ್ಯಕ್ಷ ಸುನಿಲ್ ಮುನ್ಷಿ ಹೇಳಿದ್ದಾರೆ.

‘‘ವಿದ್ಯುನ್ಮಾನ ತ್ಯಾಜ್ಯ ಕುರಿತು ಜಾಗೃತಿ ಮೂಡಿಸಲು, ಇ-ವೇಸ್ಟ್‌ನ್ನು ಎಲ್ಲೆಂದರಲ್ಲಿ ಎಸೆಯುವ ಬದಲಿಗೆ ಅವುಗಳನ್ನು ಪುನರ್ ಬಳಕೆ ಮಾಡುವುದರ ಕುರಿತ ಸಂದೇಶ ಹರಡಲು ಈ ಕಲಾಕೃತಿ ಪೂರಕವಾಗಿದೆ. ಮುಂದಿನ ಪೀಳಿಗೆಗಾಗಿ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ’’

- ವಿಶ್ವನಾಥ್ ಮಲ್ಲಬಾಡಿ, ಕಲಾವಿದ, ದಾವಣಗೆರೆ