ಜಿಲ್ಲೆ

ಪ್ರತಿಯೊಬ್ಬರಿಗೂ ದೇಶ, ಧರ್ಮ ಎರಡು ಕಣ್ಣುಗಳಿದ್ದಂತೆ; ಶೃಂಗೇರಿ ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ಅಭಿಮತ

ಬೆಂಗಳೂರು: ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ದೇಶ ಮತ್ತು ಧರ್ಮ ಎರಡು ಕಣ್ಣುಗಳಿದ್ದಂತೆ. ಈ ಎರಡು ದೃಷ್ಟಿಕೋನವಿದ್ದರೆ ಸನಾತನ ಧರ್ಮ ಹಾಗೂ ದೇಶ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು. ರಾಷ್ಟ್ರ ಮತ್ತು ಧರ್ಮದ ಬಗ್ಗೆ ಎಲ್ಲರೂ ಶ್ರಧ್ಧೆ ರೂಢಿಸಿಕೊಳ್ಳಬೇಕು. ಧರ್ಮರಕ್ಷಣೆ ವಿಷಯದಲ್ಲಿ ಬ್ರಾಹ್ಮಣರು ಕಟಿಬದ್ಧರಾಗಿರಬೇಕು. ಬ್ರಾಹ್ಮಣ್ಯದ ರಕ್ಷಣೆಯಿಂದ ಧರ್ಮ ಸಂರಕ್ಷಣೆಯಾಗುತ್ತದೆ. ಎಲ್ಲ ಕಾಲದಲ್ಲೂ ಧರ್ಮಕ್ಕೆ ಸಂಕಷ್ಟಗಳು ಸಹಜವಾಗಿ ಎದುರಾಗಿವೆ. ಹಾಗೆ ಬಂದ ಸಂಕಷ್ಟಗಳನ್ನು ಆಯಾ ಕಾಲದಲ್ಲಿದ್ದ ಮಹಾತ್ಮರು ಸಮರ್ಥವಾಗಿ ನಿವಾರಿಸಿದ್ದಾರೆ. ಸಂಕಷ್ಟಗಳು ಎದುರಾದಾಗ ಅದರಿಂದ ದೃತಿಗೆಡದೆ, ಮತ್ತಷ್ಟು ಗಟ್ಟಿಗೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರು ತಮ್ಮ ದೈನಂದಿನ ಆಚರಣೆ, ವ್ರತ, ಅನುಷ್ಠಾನಗಳಿಂದ ಧರ್ಮದ ರಕ್ಷಣೆಗೆ ಸದಾ ಕಟಿಬದ್ಧವಾಗಿರಬೇಕು. ಯುವ ಪೀಳಿಗೆ ಕೇವಲ ಲೌಕಿಕ ಸಾಧನೆಯ ಕಡೆ ಗಮನ ನೀಡುತ್ತಿದ್ದು, ಸಾಧನೆಯ ಜೊತೆಗೆ ಸಂಪ್ರದಾಯವೂ ಮುಖ್ಯ ಎಂಬುದನ್ನು ಅರಿತುಕೊಂಡು, ಮೂಲ ಪರಂಪರೆಯಿಂದ ಬಂದಿರುವ ಆಚರಣೆಗಳನ್ನು ರೂಢಿಸಿಕೊಂಡು ಧರ್ಮವನ್ನು ಬಲಪಡಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ಆದಿ ಶಂಕರಾಚಾರ್ಯರು ಸನಾತನ ಧರ್ಮ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಭಗವಂತನ ಅವತಾರವಾಗಿ ಬಂದು ಧರ್ಮವನ್ನು ಪುನುರುತ್ಥಾನಗೊಳಿಸಿದ್ದಾರೆ. ಆ ಮೂಲಕ ಹಿಂದೂ ಧರ್ಮದಲ್ಲಿ ಐಕ್ಯಮತ್ಯವನ್ನು ಸಾಧಿಸಿದರು. ಇಂದು ಬ್ರಾಹ್ಮಣರು ಆ ಐಕ್ಯಮತ್ಯವನ್ನು ಉಳಿಸಿಕೊಂಡು ಹೋಗಬೇಕು ಎಂದು ಶ್ರೀಗಳು ವಿವರಿಸಿದರು. ಬ್ರಾಹ್ಮಣರಲ್ಲಿ ಬಾಲಕರಿಗೆ ಉಪನಯನಾದಿ ಸಂಸ್ಕಾರಗಳಿಗೆ ನಿಯತವಾದ ನಿಯಮಗಳಿರುವಂತೆ ಹೆಣ್ಣುಮಕ್ಕಳಿಗೂ ಕೂಡ ನಿಯತ ಸಂಸ್ಕಾರದ ಮೂಲಕ ಶ್ರೇಯೋಮಾರ್ಗ ತೋರುವ ಅಗತ್ಯವಿದೆ. ಅದಕ್ಕೆ ದೇವಿಭಾಗವತದ ಕೊನೆಯಲ್ಲಿ ಬರುವ ಗಾಯಿತ್ರಿ ಸ್ತೋತ್ರದ ಶ್ಲೋಕಗಳನ್ನು ಉಪದೇಶ ಮಾಡಿ ಅವರು ಜಪ ಮಾಡಲು ರೂಢಿಸಬೇಕು. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಸಂಬಂಧ ಹದಗೆಡುತ್ತಿದ್ದು, ವಿವಾಹ ಎಂದರೆ ಎರಡು ಕಂಪನಿಗಳ ನಡುವೆ ಆಗುವ ಒಪ್ಪಂಧದಂತಲ್ಲ, ಇದೊಂದು ಸಂಸ್ಕಾರ ಈ ಸಂಸ್ಕಾರಕ್ಕೆ ಅರ್ಥ ದೊರೆಯುವಂತೆ ಜೀವನ ನಡೆಸಬೇಕು ಎಂದು ಜಗದ್ಗುರುಗಳು ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಸಂಘಟನೆ, ಸಂಸ್ಕಾರ, ಸ್ವಾವಲಂಬನೆಯೊಂದಿಗೆ ಸದಾ ಧರ್ಮದ ಚಿಂತನೆ ಮಾಡುವವರೇ ಬ್ರಾಹ್ಮಣರು. ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಬ್ರಾಹ್ಮಣರಲ್ಲಿದೆ. ಯಾರು ತತ್ವ, ಆದರ್ಶ, ಮೌಲ್ಯಗಳನ್ನು ಅರಿತು ಆಚರಿಸುತ್ತಾರೆಯೋ ಅವರು ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂದರು. ಶೃಂಗೇರಿ ಆವನಿ ಮಠದ ಶ್ರೀ ಅದ್ವೆತಾನಂದ ಭಾರತೀ ಸ್ವಾಮೀಜಿ ಮಾತನಾಡಿ, ವೇದ ಜಗತ್ತಿನ ಉತ್ಕೃಷ್ಟ ಜ್ಞಾನ ಭಂಡಾರವಾಗಿದ್ದು, ಅದನ್ನು ಅಧ್ಯಯನ ಮಾಡಿ ಪ್ರಸಾರ ಮಾಡುವ ದೊಡ್ಡ ಹೊಣೆಗಾರಿಕೆ ಬ್ರಾಹ್ಮಣರ ಮೇಲಿದೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಹೇಳುವುದೇ ಧರ್ಮ ಅದನ್ನು ಪಾಲಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು. ಸಮಾರಂಭದಲ್ಲಿ ಶೃಂಗೇರಿ ಶಿವಗಂಗಾ ಮಠದ ಶ್ರೀಪುರುಷೋತ್ತಮ ಭಾರತೀ ಸ್ವಾಮೀಜಿ, ಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿ ಅನುಗ್ರಹ ಭಾಷಣ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಲ್ಗೊಂಡಿದ್ದರು. ಶಾಸಕರಾದ ಎ.ರಾಮದಾಸ್, ರವಿಸುಬ್ರಹ್ಮಣ್ಯ, ಕೆ.ಗೋಪಾಲಯ್ಯ, ಶಿವರಾಮ ಹೆಬ್ಬಾರ್, ಸಂಸದರಾದ ತೇಜಸ್ವಿ ಸೂರ್ಯ, ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ, ಉಪಾಧ್ಯಕ್ಷ ಛಾಯಾಪತಿ, ಕಾರ್ಯದರ್ಶಿ ಶ್ರೀಧರಮೂರ್ತಿ, ರಾಜಗುರು ಬಿ.ಎಸ್.ದ್ವಾರಕಾನಾಥ, ವಿದ್ವಾಂಸರಾದ ಪಾವಗಡ ಪ್ರಕಾಶರಾವ್, ಬಾಬುಕೃಷ್ಣಮೂರ್ತಿ, ಸಾಹಿತಿ ಕೆ.ಪಿ.ಪುತ್ತೂರಾಯ, ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಸಿಂಹ ಮತ್ತಿತರರಿದ್ದರು.

ಪರರ ಹಿತಕ್ಕಾಗಿ ತಪಸ್ಸು ಅಗತ್ಯ

ಕಷ್ಟ ಮನುಷ್ಯನ ಬದುಕಿನಲ್ಲಿ ಸಾಮಾನ್ಯ. ತಾಪತ್ರಯ ಹಾಗೂ ತಪಸ್ಸು ಎರಡೂ ಇತಿಹಾಸದಲ್ಲಿವೆ. ಸ್ವಂತಕ್ಕಾಗಿ ಪಡುವ ಕಷ್ಟ ತಾಪತ್ರಯವಾದರೆ; ಪರರ ಹಿತಕ್ಕಾಗಿ ಪಡುವ ಕಷ್ಟ ತಪಸ್ಸು ಎನಿಸಿಕೊಳ್ಳುತ್ತದೆ. ಅಂತಹ ತಪಸ್ಸಿನ ಮೂಲಕ ಜಗತ್ತಿಗೆ ಒಳಿತನ್ನು ಮಾಡುವ ಜವಾಬ್ದಾರಿ ಬ್ರಾಹ್ಮಣರ ಮೇಲಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಹರಿದು ಬಂದ ಜನಸಾಗರ

‘ವಿಶ್ವಾಮಿತ್ರ’ ಎಂಬ ಧ್ಯೇಯ ವಾಕ್ಯದಡಿ ವಿವಿಧ ಪೂಜೆ, ಹೋಮ-ಹವನ, ಪಾರಾಯಣ-ಪಠಣ, ಭಜನೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಲರವ, ವಿಚಾರ ಗೋಷ್ಠಿ, ಸಮಾಜದ ಸಾಧಕರಿಗೆ ಗೌರವ ಸನ್ಮಾನ, ಬ್ಯುಸಿನೆಲ್ ಎನ್‌ಕ್ಲೇವ್, ವಸ್ತುಪ್ರದರ್ಶನ, ಪಾಣಿಗ್ರಹಣ ವೇದಿಕೆ, ಆಹಾರ ಮೇಳ, ವಾಣಿಜ್ಯ ಮೇಳ, ವಿವಿಧ ಕೃತಿ ಬಿಡುಗಡೆ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲ ಕಾರ್ಯಕ್ರಮವನ್ನು ನಾಡಿನ ವಿವಿದೆಡೆಗಳಿಂದ ಆಗಮಿಸಿದ್ದ ಬ್ರಾಹ್ಮಣ ಸಮುದಾಯದ ಬಂಧುಗಳು ಕಣ್ತುಂಬಿಕೊಂಡು ಸಂತಸ ಪಟ್ಟರು.

ಬ್ರಾಹ್ಮಣ ರಹಿತ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಕಲ್ಪಿಸಿಕೊಳ್ಳುವುದು ಕೂಡಾ ಅಸಾಧ್ಯ. ಸನಾತನ ಧರ್ಮ ರಕ್ಷಣೆಯಲ್ಲಿ ಆಚಾರ್ಯತ್ರಯರ ಕೊಡುಗೆ ಅಪಾರ. ಆಧ್ಯಾತ್ಮದ ಬೆಳಕನ್ನು ಪ್ರಜ್ವಲಿಸಿ ಧರ್ಮ ಪ್ರಚಾರ ಮಾಡುವಲ್ಲಿ ಬ್ರಾಹ್ಮಣರ ಪಾತ್ರ ಹಿರಿದು-ಬಿ.ವೈ. ವಿಜಯೇಂದ್ರ, ಬಿಜೆಪಿ ಅಧ್ಯಕ್ಷ
ಸದಾ ದೇಶ, ಧರ್ಮದ ಬಗ್ಗೆ ಚಿಂತನೆ ನಡೆಸುವ, ಸಕಲ ಜಗತ್ತಿಗೆ ಕಲ್ಯಾಣ ಬಯಸುವ ಸಮುದಾಯ ಬ್ರಾಹ್ಮಣ ಸಮಾಜ. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಒಗ್ಗಟ್ಟಾಗಿ ಎದುರಿಸುವ ಅಗತ್ಯವಿದೆ. ವೈದಿಕ ಸಂಸ್ಕೃತಿಯನ್ನು ರಕ್ಷಣೆ ಮಾಡಲು ಎಲ್ಲರೂ ಒಂದಾಗಬೇಕು. -ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ