ಕೂಡ್ಲಿಗಿ: ಹಿಂದು-ಮುಸ್ಲಿಂ ಭಾವೈಕ್ಯ ಮೂಡಿಸುವ ಮೊಹರಂ ಪಟ್ಟಣ ಸೇರಿ ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಐದು ದಿನಗಳಿಂದ ಗ್ರಾಮೀಣ ಭಾಗಗಳಲ್ಲಿ ಪೀರಲ ದೇವರ ಗುಡಿ ಮುಂದೆ ಅಲಾಯಿ ಕುಣಿ ತೆಗೆದು, ದೇವರಿಗೆ ಹರಕೆ ಹೊತ್ತ ಭಕ್ತರು ನಾನಾ ವೇಷಧಾರಿಗಳಾಗಿ ಪೀರಲ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.
ಹುಲಿ ಕುಣಿತ, ಹಸೇನ್- ಹುಸೇನ್ ಸೇರಿ ಅನೇಕ ಬಗೆಯ ಪೋಷಾಕು ಹಾಕಿ ಪೀರಲ ಸ್ವಾಮಿಯ ಭಕ್ತರನ್ನು ರಂಜಿಸಿದರು. ಹುಲಿ ವೇಷಧಾರಿಗಳು ಹಲಗೆ ನಾದಕ್ಕೆ ನೃತ್ಯ ಮಾಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕುಣಿದರು.
ಇದನ್ನೂ ಓದಿ:ಸಾತೇನಹಳ್ಳಿ ಶಾಂತೇಶ ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು
ಹಿಂದು-ಮುಸ್ಲಿಂ ಸಮುದಾಯದ ಸಾವಿರಾರು ಭಕ್ತರು ಸಂಜೆ ತಮ್ಮ ಕುಟುಂಬದ ಸಮೇತ ಬಂದು ಪೀರಲ ದೇವರ ದರ್ಶನ ಮಾಡಿ ಅಲಾಯಿ ಕುಣಿಗೆ ತಮ್ಮ ಹರಕೆಯಂತೆ ಉಪ್ಪು ಹಾಕಿದರು. ಜತೆಗೆ ಪೀರಲ ದೇವರಿಗೆ ಬೆಲ್ಲದ ಚೂರ್ಣ(ಸಕ್ಕರೆ ಮಿಶ್ರಣ) ನೈವೇದ್ಯ ಮಾಡಿ, ತಮ್ಮ ಕುಟುಂಬದ ಸದಸ್ಯರಿಗೆ ಹಂಚಿದರು. ರಾತ್ರಿ ಪೂರ್ತಿ ಭಕ್ತಿಯ ಪದಗಳನ್ನು ಹಾಡುತ್ತಾ ಹರಕೆ ಹೊತ್ತ ಭಕ್ತರು ಕಟ್ಟಿಗೆಗಳನ್ನು ಅಲಾಯಿ ಕುಣಿಗೆ ಹಾಕಿ ಬೆಂಕಿಯ ರಾಶಿ ಮಾಡಿದರು. ನೂರಾರು ಭಕ್ತರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು.
ಶನಿವಾರ ಬೆಳಗ್ಗೆಯಿಂದ ಸಂಜೆ ವರೆಗೂ ಪೀರಲ ಸ್ವಾಮಿಯ ನಾನಾ ಪೋಷಾಕು ಹಾಕಿದ್ದ ಹುಲಿ ವೇಷಧಾರಿಗಳು ಹಲಗೆಯ ನಾದಕ್ಕೆ ಕುಣಿದು ಕುಪ್ಪಳಿಸಿದರು. ಸಂಜೆ ಪೀರಲ ಸ್ವಾಮಿಯ ಮೆರವಣಿಗೆ ಪಟ್ಟಣದ ಹೊಸಪೇಟೆ ರಸ್ತೆಯ ಮೂಲಕ ಆಂಜನೇಯ ದೇವಸ್ಥಾನದ ಮುಂಭಾಗದಿಂದ ಹಳೆ ಸಂತೆ ಮಾರ್ಕೆಟ್ ಮೂಲಕ ದರ್ಗಾ ಬಳಿಯ ಬಾವಿಯಲ್ಲಿ ಪೂಜೆ ಮಾಡಿ ವಿಧ್ಯುಕ್ತವಾಗಿ ಪೀರಲ ದೇವರುಗಳನ್ನು ವಿಸರ್ಜನೆ ಮಾಡಿದರು.
ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ ಎಂದು ಸಿಪಿಐ ವಸಂತ ಅಸೋದೆ ತಿಳಿಸಿದರು. ಪಿಎಸ್‌ಐ ಎಂ.ಧನಂಜಯ ಸೇರಿ ಪೊಲೀಸ್ ತುಕಡಿ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.