ಬೆಳಗಾವಿ: ಸರ್ಕಾರದ ಮಾರ್ಗಸೂಚಿ ಅನ್ವಯ ನೂಲಿಚಂದಯ್ಯ ಜಯಂತಿ, ನಾರಾಯಣ ಗುರು ಜಯಂತಿ, ಶ್ರೀಕೃಷ್ಣ ಜಯಂತಿ ಹಾಗೂ ವಿವಿಧ ಜಯಂತಿ ಆಚರಣೆಯು ನಗರದ ರಂಗಮಂದಿರದಲ್ಲಿ ನಿಗದಿತ ದಿನಾಂಕದಂದು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಎಂ. ಹೊನಕೇರಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಯಂತಿ ಆಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆ.31, ಸೆ.6ರಂದು ವೇದಿಕೆ ಕಾರ್ಯಕ್ರಮದ ಮೂಲಕ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು. ಆ.31ರಂದು ನಡೆಯಲಿರುವ ನೂಲಿಚಂದಯ್ಯ ಜಯಂತಿ, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಸೆ.6ರಂದು ಶ್ರೀಕೃಷ್ಣ ಜಯಂತಿ ಆಚರಣೆ ಮಾಡಲಾಗುವುದು. ನಗರದ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾಮಂದಿರ ವರೆಗೆ ಮೆರವಣಿಗೆ ಸಾಗಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಆ.31, ಸೆ.6ರಂದು ನಡೆಯಲಿರುವ ಜಯಂತಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಉಪನ್ಯಾಸ, ಸಂಗೀತ ಕಾರ್ಯಕ್ರಮ ಜರುಗಲಿದ್ದು, ಕಲಾತಂಡಗಳು ಭಾಗವಹಿಸಲಿವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು, ಜಯಂತ್ಯುತ್ಸವ ರೂಪುರೇಷೆಗಳ ಸಿದ್ಧತೆ ಕುರಿತು ವಿವರಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.