ಜಿಲ್ಲೆ

ಹುಬ್ಬಳ್ಳಿಯಲ್ಲಿ 181 ರೂ. ಸಂಬಳಕ್ಕೆ ಉಪನ್ಯಾಸಕನಾಗಿದ್ದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ‘ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ 1958ರಲ್ಲಿ ಉಪನ್ಯಾಸಕನಾಗಿ 181 ರೂ. ಮಾಸಿಕ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದೆ. ಅದರಲ್ಲಿ 40 ರೂ. ಮನೆ ಬಾಡಿಗೆಗೆ ಹೋಗುತ್ತಿತ್ತು. ಉಳಿದ ಹಣದಲ್ಲಿ ಸಂಸಾರ ನಡೆಸುವುದು ಕಷ್ಟವಾಗಿತ್ತು. ನನ್ನ ಊರಿನ ಸ್ನೇಹಿತ ಕೃಷ್ಣಮೂರ್ತಿ ಎಂಬುವವರು ಪ್ರತಿ ತಿಂಗಳು ತಪ್ಪದೇ 50 ರೂ. ಕಳುಹಿಸುತ್ತಿದ್ದರು’ ಎಂದು ಹಳೇ ನೆನಪುಗಳನ್ನು ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಮೆಲಕು ಹಾಕಿದವರು.

ವಿಶ್ವೇಶ್ವರನಗರದ ಡಾ. ರಾಘವೇಂದ್ರ ತೋಪಖಾನೆ (ದಿ. ಡಾ. ಶ್ರೀನಿವಾಸ ತೋಪಖಾನೆ ಅವರ ಪುತ್ರ) ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು, ನನಗೆ ವಿಶ್ವವಿದ್ಯಾಲಯದಲ್ಲಿ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಸ್ನೇಹಿತ ಕೃಷ್ಣಮೂರ್ತಿ ಅವರದ್ದಾಗಿತ್ತು. ಮುಂದೊಂದು ದಿನ ವಿಶ್ವವಿದ್ಯಾಲಯದಲ್ಲಿ ಕೆಲಸ ಸಿಕ್ಕ ಮೇಲೆ ನನ್ನ ಹಣ ಮರಳಿಸಿದರಾಯಿತು ಎಂದು ಹೇಳಿ ಅವರು ನನಗೆ ಹುಬ್ಬಳ್ಳಿಯಲ್ಲಿ ಇರುವವರೆಗೂ ಪ್ರತಿ ತಿಂಗಳು 50 ರೂ. ನೀಡಿದ್ದರು ಎಂದು ಹೇಳಿದರು.

1958ರಲ್ಲಿ ನಾನು ಹುಬ್ಬಳ್ಳಿಗೆ ಬಂದಾಗ ನನಗೆ ಬಹಳ ಸಹಾಯ ಮಾಡಿದವರು ಡಾ. ಶ್ರೀನಿವಾಸ ತೋಪಖಾನೆ ಅವರು. ನನಗೆ ತಕ್ಕ ಮಟ್ಟಿಗೆ ಸಂಸ್ಕೃತ ಭಾಷೆ ಗೊತ್ತಿತ್ತು. ವ್ಯಾಕರಣ, ಸಿಸ್ಟಮೆಟಿಕ್ ಆಗಿ ಬರೆಯಲು ಬರುತ್ತಿರಲಿಲ್ಲ. ಸಂಸ್ಕೃತ ಕಲಿಯಲು ಮೇಷ್ಟ್ರು ಒಬ್ಬರನ್ನು ಗೊತ್ತುಪಡಿಸಿ ಎಂದು ತೋಪಖಾನೆ ಅವರಲ್ಲಿ ಕೇಳಿದ್ದೆ. ಅವರು ನಾನೇ ಕಲಿಸುತ್ತೇನೆ ಎಂದು ಹೇಳಿದ್ದರು. ವಾರದಲ್ಲಿ ಮೂರು ದಿನ (ಪ್ರತಿ ದಿನ ಒಂದೂವರೆ ತಾಸು) ಅವರ ಮನೆಯಲ್ಲಿಯೇ ನನಗೆ ಸಂಸ್ಕೃತ ಹೇಳಿಕೊಟ್ಟರು. ಮುಂದೆ ನಾನು ವಂಶವೃಕ್ಷ ಕಾದಂಬರಿ ತೋಪಖಾನೆ ಅವರ ಮನೆಯಲ್ಲಿಯೇ ಬರೆದಿದ್ದು ಎಂದು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಡಾ. ಭೈರಪ್ಪ ಅವರನ್ನು ಸನ್ಮಾನಿಸಲಾಯಿತು. ಡಾ. ವಿ.ಜಿ. ನಾಡಗೌಡ, ಡಾ. ರಾಘವೇಂದ್ರ ತೋಪಖಾನೆ, ಡಾ. ಕೃಷ್ಣ ನಾಡಗೌಡ, ಪ್ರೊ. ಸಿ.ಸಿ. ದೀಕ್ಷಿತ, ರಮಾ ತೋಪಖಾನೆ, ವೀಣಾ ಮಂಗಳವೇಡೆ, ಶೈಲಾ ಹುಲಕೋಟಿ, ಅಲಕಾ ಕೊಟಬಾಗಿ, ರಚನಾ ಕುಲಕರ್ಣಿ ಹಾಗೂ ಸಾಹಿತ್ಯ ಪ್ರಕಾಶನದ ಎಂ.ಎಂ. ಸುಬ್ರಹ್ಮಣ್ಯ ಇದ್ದರು.