ಚಿತ್ರದುರ್ಗ: ನೃತ್ಯ ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕ ಒತ್ತಡ ದೂರವಾಗಲಿದೆ. ದೇಹವೂ ಸದೃಢವಾಗಲಿದೆ ಎಂದು ದಾವಣಗೆರೆ ಭರತಾಂಜಲಿ ಅಕಾಡೆಮಿ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್‌ನ ನಿರ್ದೇಶಕಿ ಡಾ.ಬಿ.ಮಂಗಳಾ ಶೇಖರ್ ಸಲಹೆ ನೀಡಿದರು.
ರೋಟರಿ ಭವನದಲ್ಲಿ ಸಂಸ್ಕಾರ ಭಾರತಿ ಚಿತ್ರದುರ್ಗ ಶಾಖೆ, ರೋಟರಿ ಕ್ಲಬ್ ಹಾಗೂ ಹಿಮಂತ ಮಹಿಳಾ ವಿಕಾಸ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಭರತ ಮುನಿ ಸ್ಮತಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೃತ್ಯ ವೇದಗಳ ಕಾಲದಿಂದಲೂ ಬಳುವಳಿಯಾಗಿ ಬಂದಿರುವ ಪುರಾತನ ಕಲೆ. ಇದು ಮನರಂಜನೆಗಷ್ಟೇ ಸೀಮಿತವಲ್ಲ, ಅನೇಕ ಕಾಯಿಲೆಗಳಿಗೆ ಚಿಕಿತ್ಸಾ ಪದ್ಧತಿಯಾಗಿದೆ. ಆದ್ದರಿಂದ ಪೋಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ನೃತ್ಯ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ದಕ್ಷಿಣ ಪ್ರಾಂತ್ಯ ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಡಾ. ರಾಜೀವಲೋಚನಾ ಮಾತನಾಡಿ, , ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುವ ಸಂಘಟನೆಯಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವುದರ ಜತೆಗೆ ಜನಸಮುದಾಯಕ್ಕೆ ಕಲೆಗಳ ಮೂಲಕ ಸಂಸ್ಕಾರ ಕಲಿಸುತ್ತಿದೆ ಎಂದರು.
ಅಂಜನ ನೃತ್ಯ ಕಲಾಕೇಂದ್ರದ ಡಾ. ನಂದಿನಿ ಶಿವಪ್ರಕಾಶ್, ಶಿವಪ್ರಕಾಶ್, ಲಾಸಿಕಾ ಫೌಂಡೇಶನ್‌ನ ಶ್ವೇತಾ ಭಟ್, ನಾಟ್ಯರಂಜನಿ ಕಲಾಕೇಂದ್ರದ ಕಿರಣ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ತಂಡಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಹೊರಹೊಮ್ಮಿತು.
ರೋಟರಿ ಕ್ಲಬ್ ಅಧ್ಯಕ್ಷೆ ಮಾಧುರಿ ಮಧುಪ್ರಸಾದ್, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಡಾ.ಮಧುಸೂದನ್ ರೆಡ್ಡಿ, ಸಂಸ್ಕಾರ ಭಾರತಿ ಗೌರವಾಧ್ಯಕ್ಷ ಟಿ.ಕೆ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಉಮೇಶ್ ತುಪ್ಪದ್, ಖಜಾಂಚಿ ಕಿರಣ್‌ಶಂಕರ್, ಹಿಮಂತ ಮಹಿಳಾ ವಿಕಾಸ ಸಂಸ್ಥೆ ಅಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿ ಎಚ್.ಎನ್. ವರಲಕ್ಷ್ಮಿ, ಗಾಯಕ ಡಿ.ಒ.ಮುರಾರ್ಜಿ, ಗುರುರಾಜ್, ಮಂಜುನಾಥ್ ಭಾಗವತ್, ಚಂದ್ರಿಕಾ ಸುರೇಶ್ ಇತರರಿದ್ದರು.