ಸಾಸ್ವೆಹಳ್ಳಿ: ವಿದ್ಯೆ ಹೊರತುಪಡಿಸಿ ನಮ್ಮಲ್ಲಿರುವ ಯಾವುದೇ ಸಂಪತ್ತನ್ನು ಇತರರು ಕದಿಯಬಹುದು. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ಅಕ್ಷರಸ್ಥರಾಗಬೇಕು ಎಂದು ಇಪ್ಟಾ ತಂಡದ ಹಿರಿಯ ಕಲಾವಿದ ಪುರಂದರ ಲೋಕಿಕೆರೆ ಹೇಳಿದರು.
ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಪಂ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೀದಿನಾಟಕ ಪ್ರದರ್ಶಿಸಿ ಸೋಮವಾರ ಮಾತನಾಡಿದರು.
ವಿದ್ಯಾವಂತರಿಗೂ ಮೋಸ ಮಾಡುವ ಜನರು ಸಮಾಜದಲ್ಲಿದ್ದಾರೆ. ಇಂತಹ ಕಾಲದಲ್ಲಿ ನಾವು ಹೆಬ್ಬಟ್ಟುಗಳಾದರೆ ನಮ್ಮ ಜೀವನ ಸಂಪೂರ್ಣ ವ್ಯರ್ಥ ಎಂದು ಹೇಳಿದರು.
ಶಿಕ್ಷಣಕ್ಕೆ ಜಾತಿ,ಲಿಂಗ, ವಯಸ್ಸಿನ ಬೇಧವಿಲ್ಲ. ವಯಸ್ಕರಿಗೆ ಬಿಡುವಿನ ಸಮಯದಲ್ಲಿ ಕಲಿಯಲು ವಯಸ್ಕರ ಶಿಕ್ಷಣ ಇಲಾಖೆಯ ಶಾಲೆಗಳಿವೆ. ಅಲ್ಲಿ ಕಲಿತು ವಿದ್ಯಾವಂತರಾಗಿ ಎಂದರು.
ಹೊನ್ನಾಳಿ ರೂಪದರ್ಶಿ ಕಲಾತಂಡದ ಕಲಾವಿದರು ಸಾಕ್ಷರ ಗೀತೆಗಳು ಹಾಗೂ ಬೀದಿ ನಾಟಕಗಳನ್ನು ಪ್ರದರ್ಶಿಸಿದರು.
ಗ್ರಾಮದ ಮುಖಂಡರಾದ ಮೊಹಮ್ಮದ್ ಅಲಿ, ಗ್ರಾಪಂ ಡಿಇಒ ರೇಣುಕಮ್ಮ, ಕಲಾವಿದರಾದ ಮಲ್ಲಿಕಾರ್ಜುನ ಸ್ವಾಮಿ, ರಾಂಪುರ ಹಾಲೇಶ್, ಐರಣಿ ಚಂದ್ರು, ಬಾನಪ್ಪ, ಕುಕ್ಕುವಾಡ ಮಹಾಂತೇಶ್, ಸುರೇಶ್, ರಾಜು, ಹರಿಹರ ಶಾಂಭವಿ, ಹೊಸಹಳ್ಳಿ ಗ್ರಂಥಾಲಯ ಮೇಲ್ವಿಚಾರಕ ನಟರಾಜ್, ಆಶಾ ಕಾರ್ಯಕರ್ತೆಯರು ಇದ್ದರು.