ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಯುವ ಕಲಾವಿದ ಸಂತೋಷ ಲೋಣಿ ಅವರ ನೂರಕ್ಕೂ ಹೆಚ್ಚು ಕಲಾಕೃತಿಗಳ ಏಕವ್ಯಕ್ತಿ ಕಲಾ ಪ್ರದರ್ಶನ-ನೂರೊಂದು ನೀರಬಣ್ಣ ಜು. 13ರಿಂದ 28ರವರೆಗೆ ವಿದ್ಯಾನಗರದ ಡಾ. ಎಂ. ವಿ. ಮಿಣಜಿಗಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ ಎಂದು ಕುಂಚಬ್ರಹ್ಮ ಡಾ. ಎಂ. ವಿ. ಮಿಣಜಿಗಿ ಕಲಾ ಮಂದಿರ ಸಮಿತಿ ಅಧ್ಯಕ್ಷ ಆರ್.ಬಿ. ಗರಗ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ಯುವ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಸಂತೋಷ ಲೋಣಿ ಅವರು ನಾಡಿನ ಹೆಸರಾಂತ ಜಲವರ್ಣ ಕಲಾವಿದರ ಸಾಲಿನಲ್ಲಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ನಿಸರ್ಗ ಚಿತ್ರಗಳನ್ನು ಅತ್ಯುತ್ತಮವಾಗಿ ಬಿಡಿಸುತ್ತಾರೆ. ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶ ನಮ್ಮೆಲ್ಲರದಾಗಿದೆ ಎಂದರು.
ನಿತ್ಯ ಬೆಳಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರು ಕಲಾಕೃತಿಗಳನ್ನು ವೀಕ್ಷಿಸಬಹುದು. ಕಲಾಕೃತಿಗಳು ಮಾರಾಟಕ್ಕೂ ಇವೆ. ಜು. 13 ರಂದು ಬೆಳಗ್ಗೆ 11.30 ಗಂಟೆಗೆ ಹಿರಿಯ ಕಲಾವಿದ ವಿ.ಡಿ. ಬಡಿಗೇರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಟಾಟಾ ಹಿಟಾಚಿ ಪ್ಲಾ್ಯಂಟ್ ಮುಖ್ಯಸ್ಥ ರಾಜೇಶಕುಮಾರ ಗುಪ್ತಾ, ಪ್ರಕಾಶ ಸುಲೇಭಾವಿ, ವೀರೇಶ ಹರಮಚಡಿ ಭಾಗವಹಿಸುವರು. ಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.
ಕಲಾವಿದ ಸಂತೋಷ ಲೋಣಿ ಮಾತನಾಡಿ, ನಾನು ಬೆಳಗಾವಿ ಜಿಲ್ಲೆಯ ಅಥಣಿಯವನಾಗಿದ್ದು, ಡಿಪ್ಲೊಮಾ ಆಟೋಮೊಬೈಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ನಾನು ಸದ್ಯ ಧಾರವಾಡ ಟಾಟಾ ಹಿಟಾಚಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಾವಿರಾರು ಅಧಿಕ ಜಲವರ್ಣದ ಕಲಾಕೃತಿಗಳನ್ನು ರಚಿಸಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಚಿತ್ರಕಲಾ ಹುಚ್ಚು ಇತ್ತು. ಪ್ರತಿದಿನ ಒಂದು ಚಿತ್ರ ಬಿಡಿಸುವ ಹವ್ಯಾಸ ರೂಢಿಸಿಕೊಂಡಿದ್ದೇನೆ. ಇದೇ ಮೊದಲ ಬಾರಿಗೆ ಏಕವ್ಯಕ್ತಿ ನೂರು ಕಲಾಚಿತ್ರ ಪ್ರದರ್ಶನವಾಗುತ್ತಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಜಿ.ಆರ್. ಮಲ್ಲಾಪುರ, ವಸಂತ ಬಳ್ಳಾರಿ, ಕೆ.ವಿ. ಮಂಜುಳಾ, ಕೆ.ವಿ ಶಂಕರ ಇದ್ದರು.