ಹುಬ್ಬಳ್ಳಿ: ಚಿತ್ರಕಲಾವಿದರ ಸಮಸ್ಯೆಗಳು ಹಲವಾರು ಇವೆ. ಸರ್ಕಾರ ಸಾಹಿತ್ಯ ಕ್ಷೇತ್ರಕ್ಕೆ ನೀಡಿದಂತೆ ನಮಗೂ ಪ್ರಾಮುಖ್ಯತೆ ನೀಡಬೇಕೆಂಬುದು ಕಲಾವಿದರ ಆಶಯ. ಸಂಘಟಿತರಾಗಿ ಧ್ವನಿ ಗಟ್ಟಿಗೊಳಿಸಬೇಕು, ಚಿತ್ರಕಲಾವಿದರ ರಾಜ್ಯ ಸಮ್ಮೇಳನ ಮಾಡುವ ಉದ್ದೇಶದಿಂದ ರಾಜ್ಯ ಪ್ರವಾಸ ಕೈಗೊಂಡಿರುವೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪಿ.ಎಸ್. ಕುಮಾರ ಹೇಳಿದರು.
ಇಲ್ಲಿಯ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಚಿಟಗುಪ್ಪಿ ಆಸ್ಪತ್ರೆ ಆವರಣದ ಎಸ್ ಜೆಎಂವಿ ಸಂಘದ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅಕಾಡೆಮಿ ಸ್ಥಾಪನೆಯಾಗಿ 18 ವರ್ಷ ಕಳೆದರೂ ಕಲಾವಿದರು ಒಂದುಗೂಡಿ ಸಮಾವೇಶ ಮಾಡಿಲ್ಲ. ಸಾಹಿತ್ಯ ಕ್ಷೇತ್ರಕ್ಕೆ ಗಟ್ಟಿ ಧ್ವನಿ ಇದೆ. ಚಿತ್ರಕಲೆಯು ಸಂಸ್ಕೃತಿ, ಪರಂಪರೆಯ ವಾಹಕವಾಗಿ ಕೆಲಸ ಮಾಡುತ್ತದೆ. ಹೀಗಿದ್ದರೂ ಸರ್ಕಾರ ಇದನ್ನು ನಿರ್ಲಕ್ಷಿಸಿದೆ. ಎಲ್ಲದಕ್ಕೂ ಮಾನ್ಯತೆ ನೀಡಬೇಕು. ಈ ದಿಸೆಯಲ್ಲಿ ರಾಜ್ಯದ ನಾಲ್ಕು ಭಾಗದಲ್ಲಿ ಅಭಿಪ್ರಾಯ ಸಂಗ್ರಹಿಸಿ ಕೂಡಲೇ ಸಮಾವೇಶ ಆಯೋಜಿಸಲಾಗುವುದು. ಅಲ್ಲಿ ಗಹನ ಚರ್ಚೆ ನಡೆಸಿ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಕಲಾವಿದರ ಸಮುದಾಯ ಬಹಳಷ್ಟು ಬೆಳೆದಿದೆ. ಅನೇಕ ಕಲಾವಿದರು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿದ್ದಾರೆ. ಆದರೆ, ಸಮರ್ಪಕ ಪ್ರಚಾರ ಸಿಗುತ್ತಿಲ್ಲ. ಬಿಟ್ಟು ಹೋದ ಕಲಾವಿದರನ್ನು ಗುರುತಿಸಿ ದಾಖಲೀಕರಣ ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ ಎಂದರು.
ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಸೇರಿ ನಾನಾ ರಾಜ್ಯಗಳ ಕಲಾವಿದರ ಅದ್ಭುತ ಚಿತ್ರಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ. ಚಿತ್ರಕಲೆ ಎಂಬುದು ಪರಂಪರೆ ಬಿಂಬಿಸುವ ವೇದಿಕೆ. ಅದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಿದೆ ಎಂದರು.
ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರದ ಸಂಯೋಜಕ ಶ್ರೀನಿವಾಸ ಶಾಸ್ತ್ರಿ ಮಾತನಾಡಿ, ಕಲಾವಿದರು ಸಾಂಸ್ಕೃತಿಕ ರಾಯಬಾರಿಗಳು. ಸಂಘಟನೆಗಾಗಿ ರಾಜ್ಯದ ಅಕಾಡೆಮಿ ಯಾವುದೇ ಉಪಕ್ರಮಗಳನ್ನು ಕೈಗೊಂಡರೂ ಸಹಕಾರ ನೀಡಲಾಗುವುದು. ಉತ್ತರ ಕರ್ನಾಟಕದಲ್ಲಿ ಅಕಾಡೆಮಿಯ ಪ್ರಾದೇಶಿಕ ಕಚೇರಿ ಆರಂಭಿಸಬೇಕೆಂದು ಮನವಿ ಮಾಡಿದರು.
ಅತಿಥಿಯಾಗಿದ್ದ ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ವಿಜಯಮಹಾಂತೇಶ ಕಾಲೇಜಿನಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡಲು ತಮ್ಮಿಂದಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪಾಲಕರು ಪ್ರೋತ್ಸಾಹ ನೀಡಬೇಕು. ಪ್ರಪಂಚ ಗೆಲ್ಲುವ ಶಕ್ತಿ ಕಲಾವಿದರಲ್ಲಿ ಇರುತ್ತದೆ. ಹಾಗಾಗಿ ಮನಸ್ಸು ಕೊಟ್ಟು ಚಿತ್ರ ಬಿಡಿಸಬೇಕು. ಆಗಲೇ ಈ ಭಾಗದಲ್ಲಿಯೂ ರವಿವರ್ಮ, ಪಿಕಾಸೋ ಅವರಂತಹ ಕಲಾವಿದರು ಬೆಳೆದುಬರಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ ಜೆಎಂವಿಎಸ್ ಗೌರವ ನಿರ್ದೇಶಕ ಶಶಿ ಸಾಲಿ ಮಾತನಾಡಿದರು.
ಎಸ್ ಜೆಎಂವಿ ಸಂಘದ ಗೌರವಾಧ್ಯಕ್ಷ ಅರವಿಂದ ಕುಬಸದ, ಡಾ. ಸಿ.ಡಿ. ಜಟ್ಟೆನ್ನವರ, ಇತರರು ಪಾಲ್ಗೊಂಡಿದ್ದರು.
ಪ್ರಾಚಾರ್ಯ ಆರ್.ಎಸ್. ಹಿರೇಗೌಡರ ಸ್ವಾಗತಿಸಿದರು. ಸಂಯೋಜಕ ಡಾ. ಪಿ.ಆರ್. ಬಹುರೂಪಿ ನಿರ್ವಹಿಸಿದರು.