ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಮಜೇಥಿಯಾ ಫೌಂಡೇಷನ್ ವತಿಯಿಂದ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಭಾನುವಾರ ಜರುಗಿತು. 7 ಜನರಿಗೆ ಕಾಲು ಜೋಡಣೆ ಮಾಡಲಾಯಿತು.
ಅತಿಥಿಯಾಗಿದ್ದ ಗ್ರಾಹಕರ ವೇದಿಕೆ ನ್ಯಾಯಾಧೀಶೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಮಾತನಾಡಿ, ಮನುಷ್ಯನ ಜೀವನಕ್ಕೆ ಪ್ರತಿಯೊಂದು ಅಂಗವು ಮಹತ್ವವಾದದ್ದು. ಆದರೆ, ಅವಡಕ್ಕೆ ಸಿಲುಕಿ ಅಂಗವಿಕಲರಾದವರಿಗೆ ದಿಕ್ಕು ತೋಚದಂತಾಗುತ್ತದೆ. ಅಂಥವರ ಚಿಂತೆಯನ್ನು ಕೃತಕ ಕಾಲು ಜೋಡಣೆ ಮಾಡುವ ಮೂಲಕ ಮಜೇಥಿಯಾ ಫೌಂಡೇಷನ್ ದೂರ ಮಾಡಿದೆ ಎಂದು ಹೇಳಿದರು.
ಅಂಗವಿಕಲರು ಈ ಶಿಬಿರದ ಪ್ರಯೋಜನ ಪಡೆದು ಬದುಕು ಉಜ್ವಲಗೊಳಿಸಿಕೊಳ್ಳಬೇಕು. ಮುಂದಿನ ಸಾಧನೆಗೆ ಅಣಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅವರು ಮಾತನಾಡಿ, ಜೀವನದಲ್ಲಿ ಮನುಷ್ಯನಿಗೆ ಅನೇಕ ಕಷ್ಟಗಳು ಬರುತ್ತವೆ. ನಮ್ಮ ಬದುಕು ಹೋರಾಟವಾಗಬೇಕು. ಅದರ ಪ್ರತಿಫಲವಾಗಿ ಸಿಕ್ಕ ಜಯ ಸಂತೋಷ ಕೊಡುತ್ತದೆ. ಫೌಂಡೇಷನ್ ಅಂಗವಿಕಲರಿಗೆ ಪ್ರಾಧಾನ್ಯತೆ ನೀಡಿ ಅವರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು.
ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಮಹಿಳಾ ವಿಭಾಗದ ಕಾರ್ಯದರ್ಶಿ ಗಾಯತ್ರಿ ನೆಲ್ಲಿಕೊಪ್ಪ, ಸಾಧನಾ ಪೂಜಾರ ಉಪಸ್ಥಿತರಿದ್ದರು.
ಫೌಂಡೇಷನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಂಕರ ಕಮಟೆ ಸ್ವಾಗತಿಸಿದರು. ನವೀನ ಮಾಲಿನ ಕಾರ್ಯಕ್ರಮ ನಿರೂಪಿಸಿದರು. ರೋಹನ ಗೊಂದಕರ ವಂದಿಸಿದರು.