ದಕ್ಷಿಣ ಭಾರತದಲ್ಲಿ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನಾಳ ಕೆರೆಯಲ್ಲಿ ಪಕ್ಷಿಗಳ ಸಂತಾನೋತ್ಪತ್ತಿಗಾಗಿ ಕೆರೆಯ ಹೂಳು ತೆಗೆದು ಮಧ್ಯಭಾಗದಲ್ಲಿ 10 ಕೃತಕ ದ್ವೀಪಗಳ ನಿರ್ವಣಕ್ಕೆ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.
ವಿದೇಶಿ ಪಕ್ಷಿಗಳೇ ಹೆಚ್ಚು: 673 ಎಕರೆ ವಿಸ್ತೀರ್ಣವಿರುವ ಬೋನಾಳ ಕೆರೆ ವಿಸ್ತೀರ್ಣದಲ್ಲಿ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮಕ್ಕಿಂತ ಅತಿ ದೊಡ್ಡದಾಗಿದೆ. ಪ್ರತಿ ವರ್ಷ ನವೆಂಬರ್ನಿಂದ ಫೆಬ್ರವರಿ ಅವಧಿಯಲ್ಲಿ ಆಸ್ಟ್ರೇಲಿಯಾ, ಮಲೇಷ್ಯಾ, ಅರ್ಜೆಂಟೀನಾ, ನೈಜೀರಿಯಾ, ಸೈಬೀರಿಯಾ ಹಾಗೂ ಶ್ರೀಲಂಕಾದಿಂದ ಅನೇಕ ಪ್ರಬೇಧದ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ಸ್ವದೇಶಿ ಹಾಗೂ ವಿದೇಶಿ ಪಕ್ಷಿಗಳ ಸಂತತಿ ಹೆಚ್ಚಳಕ್ಕೆ ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ.
10 ದ್ವೀಪಗಳ ನಿರ್ಮಾಣ: ಕೆರೆಯ ಮಧ್ಯಭಾಗದಲ್ಲಿ 10 ಕೃತಕ ದ್ವೀಪಗಳನ್ನು ನಿರ್ವಿುಸಿ, ಅಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ತನ್ಮೂಲಕ ಪಕ್ಷಿಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತದೆ.
ಪ್ರವಾಸಿಗರನ್ನು ಆಕರ್ಷಿಸಲು ಕೆರೆದಂಡೆಯಲ್ಲಿ ಕೂರಲು ಆಸನಗಳ ವ್ಯವಸ್ಥೆ, ಮಾಹಿತಿ ಫಲಕಗಳು, ಫೋಟೋಗ್ರಫಿಗೆ ಸೂಕ್ತ ಸ್ಥಳಾವಕಾಶ, ಕೆರೆಯ ಸುತ್ತ ತಂತಿ ಬೇಲಿ ನಿರ್ವಣ, ದೇಶಿ ಹಾಗೂ ವಿದೇಶಿ ಪಕ್ಷಿಗಳ ಮಾಹಿತಿ ಫಲಕ ಸೇರಿ ವಿವಿಧ ಕಲಾಕೃತಿಗಳನ್ನು ನಿರ್ವಿುಸಲು ಇಲಾಖೆ ನಿರ್ಧರಿಸಿದೆ. ಬೋನಾಳ ಕೆರೆಗೆ ಕೃಷ್ಣಾ ನದಿಯಿಂದ ನೀರು ಹರಿಸಲಾಗುತ್ತದೆ. ಹೀಗಾಗಿ ಈ ಕೆರೆಯಲ್ಲಿ ವರ್ಷಪೂರ್ತಿ ನೀರು ಇರುತ್ತದೆ.
ಕಳೆದ ಹಲವು ವರ್ಷಗಳಿಂದ ದೇಶ, ವಿದೇಶಗಳ ಸಾವಿರಾರು ಪಕ್ಷಿಗಳು ವಲಸೆ ಬಂದು ಇಲ್ಲಿ ನೆಲೆಸುತ್ತಿವೆ. ಆದರೆ, ಅವುಗಳಿಗೆ ಇದುವರೆಗೂ ಯಾವುದೇ ರೀತಿಯ ರಕ್ಷಣೆ ಇರಲಿಲ್ಲ. ಜತೆಗೆ ಇಲ್ಲಿಗೆ ಬರುವ ಪ್ರವಾಸಿಗರಿಗೂ ಮೂಲಸೌಕರ್ಯದ ಕೊರತೆ ಕಾಡುತ್ತಿತ್ತು. ಇದೀಗ ಈ ಎಲ್ಲ ಕೊರತೆಗಳನ್ನು ನೀಗಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
ಕೆರೆಯ ಸುತ್ತಮುತ್ತ ಇರುವ ಪಕ್ಷಿಗಳು: ಮಿಂಚುಳ್ಳಿ (ಕಿಂಗ್ಫಿಶರ್), ಕೆಂಪು ನವಿಲು (ರೆಡ್ ಪಿಕಾಕ್), ಕರಿತಲೆ ಹಕ್ಕಿ (ಬ್ಲಾಕ್ ಹೆಡೆಡ್ ಬರ್ಡ್), ಬಿಳಿ ಕತ್ತಿನ ಕೊಕ್ಕರೆ (ಬಾರ್ ಹೆಡ್ಡಡ್ ಗೂಸ್), ಸರ್ಪ ಪಕ್ಷಿ (ಸ್ನೇಕ್ ಬರ್ಡ್), ಚಕ್ರವಾಕ (ಬ್ರಾಹ್ಮಿನಿ ಡಕ್) ಸೇರಿ 100ಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳು ಇಲ್ಲಿವೆ.
ಬೋನಾಳ ಕೆರೆಯನ್ನು ಇತ್ತೀಚೆಗೆ ರಾಜ್ಯ ಸರ್ಕಾರ ‘ಬೋನಾಳ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೊಷಿಸಿದೆ. ದೇಶ, ವಿದೇಶಗಳ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತವೆ. ಅವುಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಮತ್ತು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. | ಸಂಜಯ್ ಮೋಹನ್ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕೆರೆಯಲ್ಲಿ ಹೆಚ್ಚು ಜಲಚರಗಳಿದ್ದು, ಪಕ್ಷಿಗಳಿಗೆ ಯಥೇಚ್ಚವಾಗಿ ಆಹಾರ ಲಭ್ಯವಿದೆ. ಕೆರೆಯ ಪರಿಸರದಲ್ಲಿನ ಪಕ್ಷಿಗಳ ಬಗ್ಗೆ ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ. ಅದನ್ನು ಆಧರಿಸಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು. | ಎಸ್.ಎಸ್. ರವಿಶಂಕರ್ ಯಾದಗಿರಿ ಜಿಲ್ಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ
| ದ್ವಾರಕಾನಾಥ್ ಎಲ್. ಬೆಂಗಳೂರು