ಜಿಲ್ಲೆ

ಶಿಕ್ಷಕರಿಗೆ ಪರ್ಯಾಯ ವ್ಯವಸ್ಥೆ ಅಸಾಧ್ಯ...

ಪ್ರಶಾಂತ ಜಿ. ಭಾಗ್ವತ

ಸಂಶೋಧಕ ಕೊಳ್ಳೇಗಾಲ ಶರ್ಮ ಅಭಿಪ್ರಾಯ

ಕೃತಕ ಬುದ್ಧಿಮತ್ತೆ (ಎಐ)ಯ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಹ ಶಿಕ್ಷಕರಿಗೆ ಪರ್ಯಾಯವಾಗಿ ಬೇರಾವ ವ್ಯವಸ್ಥೆಯೂ ತರಗತಿಯ ಕೋಣೆ ಆಕ್ರಮಿಸಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಕರಿಗೆ ಲಭ್ಯವಾಗುವ ಅತ್ಯುನ್ನತ ಸಹಾಯಕನನ್ನಾಗಿ ನಾವು ಕೃತಕ ಬುದ್ಧಿಮತ್ತೆ (ಎಐ)ಯ ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ ಎಂದು ಖ್ಯಾತ ಸಂಶೋಧಕ, ವಿಜ್ಞಾನ ಲೇಖಕ ಎಎಸ್​ಕೆವಿಎಸ್​ ಶರ್ಮ ಕೊಳ್ಳೇಗಾಲ ಅಭಿಪ್ರಾಯಪಟ್ಟರು.

ಉಡುಪಿಯ ಒಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಪ್ರೌಢಶಾಲಾ ಸಹಶಿಕ್ಷಕರಿಗಾಗಿ ಏ.5ರಂದು ಆಯೋಜಿಸಿದ್ದ ತರಗತಿ ಕೋಣೆಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​) ಬಳಕೆ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಶಿಕ್ಷಕರಿಗೆ ಪ್ರಾತ್ಯಕ್ಷಿಕೆ

ಎಲ್ಲ ಕ್ಷೇತ್ರಗಳಲ್ಲೂ ಸಹ ಇಂದು ಯಾಂತ್ರಿಕ ಕೃತಕ ಬುದ್ಧಿಮತ್ತೆ ಬಳಸಿಕೊಳ್ಳಲಾಗುತ್ತಿದೆ. ಅನೇಕ ಸ್ವರೂಪಗಳಲ್ಲಿ ಅವು ಲಭ್ಯವಿದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಸಹ ತಂತ್ರಜ್ಞಾನ ಬಳಸಿಕೊಂಡು, ಆ ವ್ಯವಸ್ಥೆಯನ್ನು ನಮ್ಮ ತರಗತಿಯ ಪ್ರಕ್ರಿಯೆಗಳಲ್ಲಿ ಒಳಗೊಳ್ಳುವ ಮೂಲಕ ಮಕ್ಕಳಿಗೆ ಇನ್ನಷ್ಟು ಶಿಕ್ಷಣ ನೀಡಲು ಸಹಕಾರಿಯಾಗಬಹುದು. ಶಿಕ್ಷಕರು ತಮ್ಮ ದಿನನಿತ್ಯದ ಶೈಕ್ಷಣಿಕ ಚಟುವಟಿಕೆಗಳನ್ನು ಇನ್ನಷ್ಟು ಕೌಶಲಭರಿತವಾಗಿ ನಿರ್ವಹಿಸಬಹುದು ಎಂದು ತಿಳಿಸಿ, ತಂತ್ರಜ್ಞಾನ ಹೇಗೆ ಸಹಕಾರಿ ಎನ್ನುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಯಪಡಿಸಿದರು.

ಸಮಯ ಉಳಿತಾಯ

ಡಯಟ್​ ಪ್ರಾಂಶುಪಾಲ ಡಾ. ಅಶೋಕ ಕಾಮತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಲ್ಲಿ ಯಾಂತ್ರಿಕ ಸೌಲಭ್ಯದಿಂದ ಸಮಯ ಪಾಲನೆ ಹಾಗೂ ಸಮಯ ಉಳಿತಾಯ ಎರಡೂ ಸಾಧ್ಯವಿದೆ ಎಂದರು.

ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲೆಯ ಐದು ವಲಯಗಳಿಂದ 50 ಶಿಕ್ಷಕರು ಪಾಲ್ಗೊಂಡಿದ್ದರು. ಶೆಟ್ಟಿಬೆಟ್ಟು ಶಾಲೆಯ ಶಿಕ್ಷಕ ಸಂದೀಪ ಸ್ವಾಗತಿಸಿದರು. ವಳಕಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ವಂದಿಸಿದರು.