ಜಿಲ್ಲೆ

ಸಣ್ಣ ಮಳೆಗೂ ಕೃತಕ ನೆರೆ! : ಮೂಲ್ಕಿ ಹೋಬಳಿಯಲ್ಲಿ ತೋಡಿನ ಹೂಳೆತ್ತದೆ ಕೃಷಿ ನಾಶ ಅಧಿಕಾರಿಗಳು, ಇಲಾಖೆ ನಿರ್ಲಕ್ಷ್ಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಮೂಲ್ಕಿ ಹೋಬಳಿ ಅಧಿಕ ಗ್ರಾಮೀಣ ಪ್ರದೇಶ ಹೊಂದಿದ್ದು ಇಲ್ಲಿನ ಹಳ್ಳ, ಮದಕಗಳು, ಅಣೆಕಟ್ಟುಗಳ ಹಾಗೂ ಮಳೆನೀರು ಹರಿಯುವ ತೋಡುಗಳ ನಿರ್ವಹಣೆ ಮಾಡದೆ ಸಣ್ಣ ಮಳೆಗೂ ಕೃತಕ ನೆರೆ ಏಳುತ್ತಿದೆ.

ಬಹಳಷ್ಟು ಕೃಷಿ ನಾಶ, ಮಣ್ಣಿನ ಸವಕಳಿ, ಭೂಮಿ ಜವುಗು ಉಂಟಾಗಿದ್ದು, ಹಿಂದೆ ಗ್ರಾಮಸ್ಥರು ಕೃಷಿಗೆ ಉಪಯೋಗಿಸಲು ಮದಕ ಹಾಗೂ ತೋಡುಗಳ ಹೂಳೆತ್ತಿ ದಂಡೆ ಕಟ್ಟುತ್ತಿದ್ದರು, ಆದರೆ ಕಾನೂನು ತೊಡಕಿನಿಂದ ಗ್ರಾಪಂ ವ್ಯಾಪ್ತಿಯಲ್ಲಿ ತೋಡಿನ ಹೂಳೆತ್ತದೆ ಕೃತಕ ನೆರೆ, ಕೃಷಿ ನಾಶವಾಗುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕೃಷಿಗೆ ತೊಂದರೆ: ಮೂಲ್ಕಿ ಹೋಬಳಿ ಕಿಲ್ಪಾಡಿ, ಅತಿಕಾರಿಬೆಟ್ಟು, ಪಡುಪಣಂಬೂರು ಗ್ರಾಪಂ ವ್ಯಾಪ್ತಿಯಲ್ಲಿ ತೋಡು, ಅಣೆಕಟ್ಟುಗಳ ಬಳಿಯಲ್ಲಿ ಹೂಳೆತ್ತದ ಕಾರಣ ಅಗಾಧ ಪ್ರಮಾಣದಲ್ಲಿ ಮರಳು ಮತ್ತು ಹೂಳು ಕಸಕಡ್ಡಿಗಳು ತಂಬಿ ಅಣೆಕಟ್ಟಿನ ನೀರಿನ ಹರಿವು ಮತ್ತು ಅಣೆಕಟ್ಟಿನಲ್ಲಿ ನಿಲ್ಲುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಭಾಗದ ತೋಡುಗಳ ಬದಿಯಲ್ಲಿ ಗಿಡ ಕಂಟಿಗಳು ಹಬ್ಬಿವೆ ಮಳೆ ನೀರು ಸರಿಯಾಗಿ ಹರಿಯದೆ ಎಕ್ಕರೆಗಟ್ಟಲೆ ಕೃಷಿ ನಾಶ ಸಂಭವಿಸುತ್ತಿದೆ.

ಇಲಾಖೆ ಅನುಮತಿ ಅಗತ್ಯ: ಕಿಲ್ಪಾಡಿ ಹಾಗೂ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಶಿಮಂತೂರು ಕುಲಂದಕಟ್ಟ, ಬಾಚಿ ಕಟ್ಟ, ಮಾನಂಪಾಡಿ ಹೊಯ್ಗೆಕಟ್ಟ ಅಣೆಕಟ್ಟುಗಳಿಂದ ನೀರು ತೋಡಿನ ಮೂಲಕ ಶಾಂಭವಿ ನದಿ ಸೇರುತ್ತದೆ. ಈ ತೋಡಿನಲ್ಲಿ ಮರಳು ಹಾಗೂ ಹೂಳು ತೆಗೆಯಲು ಗಣಿ ಇಲಾಖೆ ಅನುಮತಿ ಅಗತ್ಯ, ಆದರೆ ಕೃಷಿಕರು ಕೃಷಿ ಉಪಯೋಗಕ್ಕೂ ಮರಳು ಅಥವಾ ಹೂಳು ತೆಗೆಯಲು ಅಧಿಕಾರಿ ವರ್ಗ ಅಡ್ಡಿಪಡಿಸುವ ಕಾರಣ ಮೊದಲೇ ಕಾರ್ಮಿಕರ ಕೊರತೆ ಅನುಭವಿಸುವ ಕೃಷಿಕರು ಹೂಳು ತೆಗೆಯುವುದನ್ನು ಬಿಟ್ಟು ಹಲವು ವರ್ಷಗಳೇ ಸಂದಿವೆ.

ಗ್ರಾಮ ಸಭೆಯಲ್ಲಿ ಪ್ರಸ್ತಾಪ: ಈ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾಪವಾಗಿ ಪಂಚಾಯಿತಿ ಮುಡಾ ಹಾಗೂ ಜಲಾನಯನ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಮುಡಾ ಇಲಾಖೆ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಬಹುದಾದರೆ, ತೋಡಿನ ಹೂಳೆತ್ತುವಿಕೆ ಯಾಕೆ ಆಗುತ್ತಿಲ್ಲ? ಜಲಾನಯನ ಮತ್ತು ಸಣ್ಣ ನೀರಾವರಿ ಇಲಾಖೆ ವೆಂಟೆಡ್ ಡ್ಯಾಮ್(ಸಣ್ಣ ಅಣೆಕಟ್ಟು) ಕಟ್ಟುವಲ್ಲಿ ಮಾತ್ರ ಆಸಕ್ತಿ ತೋರಿಸುತ್ತಿದ್ದು ಅದರ ನಿರ್ವಹಣೆ ಮಾತ್ರ ದೇವರೇ ಗತಿ ಎಂಬ ಸ್ಥಿತಿ ಇದೆ. ಜನರನ್ನು ನಿರ್ಬಂಧಿಸುವ ಇಲಾಖೆ ಸ್ವತಃ ಕಾಮಗಾರಿ ಕೈಗೆತ್ತಿಕೊಂಡು ಹೂಳೆತ್ತಿದರೆ ಕೃಷಿಗೆ ಅನುಕೂಲವಾಗುತ್ತದೆ. ಕೃತಕ ನೆರೆಯಿಂದ ಪ್ರತಿವರ್ಷ ತೋಡು ಬದಿ ವಾಸವಿರುವ ಕುಟುಂಬಗಳ ನೆರೆ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಅಣೆಕಟ್ಟುಗಳಿಗೆ ಹಾನಿ

ಅಣೆಕಟ್ಟುಗಳ ನೀರಿನ ಪಾತ್ರದಲ್ಲಿ ಅಗಾಧ ಹೂಳು ಹಾಗೂ ಮರಗಳು ತುಂಬಿರುವ ಕಾರಣ ನೆರೆ ನೀರು ಜತೆಯಲ್ಲಿ ಮರದ ದಿಮ್ಮಿಗಳು ನೇರವಾಗಿ ಅಣೆಕಟ್ಟಿನ ದಂಡೆಗೆ ಅಪ್ಪಳಿಸುತ್ತಿದ್ದು, ಅಣೆಕಟ್ಟು ಬಾಗಿಲು ಹಾಳಾಗಲು ಕಾರಣವಾಗುತ್ತಿದೆ. ಮಳೆಗಾಲದಲ್ಲಿ ಹಾನಿಯಾದರೆ ಮುಂದೆ ಬೇಸಿಗೆ ಸಮಯ ಹಲಗೆ ಹಾಕಿದಾಗ ಸಂಗ್ರಹಗೊಂಡ ನೀರು ಸೋರಿ ಕೃಷಿ ಕಾರ್ಯಗಳಿಗೆ ನೀರು ಸಿಗದೆ ಸಮಸ್ಯೆಯಾಗುತ್ತದೆ.

ಸಭೆಗೆ ಹಾಜರಾಗದ ಅಧಿಕಾರಿಗಳು

ಮೂಲ್ಕಿ ತಾಲೂಕು ವ್ಯಾಪ್ತಿಯ ಗ್ರಾಮಸಭೆಗೆ ಮುಡಾ ಹಾಗೂ ಜಲಾನಯನ ಇಲಾಖೆ ಬರುವುದೇ ಇಲ್ಲ, ಇನ್ನು ಸಣ್ಣ ನೀರಾವರಿಯವರು ಬಂದರೆ ನಮ್ಮಲ್ಲಿ ಹೇಳುವುದು ಏನೂ ಇಲ್ಲ ಎಂಬ ಸಿದ್ಧ ಉತ್ತರ. ಈ ಬಗ್ಗೆ ಗ್ರಾಮಸ್ಥರು ನೋಡಲ್ ಅಧಿಕಾರಿ ಬಳಿ ಪ್ರಶ್ನಿಸಿದರೆ ಅವರಿಗೆ ಗ್ರಾಮ ಸಭೆಯ ಆಮಂತ್ರಣ ಪತ್ರ ನೀಡಲಾಗಿದೆ ಅವರು ಏನೋ ಸಬೂಬು ನೀಡಿ ಬರದಿದ್ದರೆ ಏನು ಮಾಡುವುದೆಂದು ಹೇಳಿ ಜಾರಿಕೊಳ್ಳುತ್ತಾರೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಡಾ ಹಾಗೂ ಜಲಾನಯನ ಇಲಾಖೆ ಸಮಸ್ಯೆಗಳು ಬೆಟ್ಟದಷ್ಟಿದ್ದು ಪರಿಹಾರವಾಗುವುದಿಲ್ಲ ಎಂದು ಪ್ರತಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆರೋಪ. ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಗಮನ ಹರಿಸುವುದು ಅಗತ್ಯ.

ಹಿಂದೆ ಕೃಷಿಕರಿಂದ ಆಗುತ್ತಿದ್ದ ಕೆಲಸಗಳಿಗೆ ತಡೆಯಾದ ಕಾರಣ ಸಮಸ್ಯೆಯಾಗಿದೆ ಮುಡಾ, ಜಲಾನಯನ ಇಲಾಖೆ ಯೋಜನೆ ರೂಪಿಸಿ ಅಣೆಕಟ್ಟುಗಳ ನೀರಿನ ಪಾತ್ರದಲ್ಲಿ ಹೂಳೆತ್ತಿ ಕೃಷಿ ಹಾಗೂ ಪರಿಸರ ನಾಶವಾಗದಂತೆ ರಕ್ಷಿಸಬೇಕು. ಗೋಪಿನಾಥ ಪಡಂಗ ಪ್ರಗತಿಪರ ಕೃಷಿಕ, ಕಿಲ್ಪಾಡಿ ಗ್ರಾಪಂ ಸದಸ್ಯ https://www.vijayavani.net/thiruvonam-eid-milad-celebration https://www.vijayavani.net/practice-class-meeting-in-belthangady