ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿ ಅಶೋಕ್ ಶೆಟ್ಟಿ -ಜಯಂತಿ ಶೆಟ್ಟಿ ದಂಪತಿಯ ಮನೆಯ ಒಳಗೂ ಸೇರಿ ಆವರಣದಲ್ಲಿ ಹಲವು ಅಡಿಯಷ್ಟು ನೀರು ತುಂಬಿದ್ದು, ಹೊರಗೆ ಬರಲಾಗದೆ ಜಲದಿಗ್ಬಂಧನದಲ್ಲಿ ಸಿಲುಕಿದ್ದಾರೆ. ಸದ್ಯ ಮೇಲ್ಮಹಡಿಯಲ್ಲಿರುವ ಬಾಡಿಗೆಯವರೊಂದಿಗೆ ವಾಸವಾಗಿರುವ ದಂಪತಿ, ಹೊರಗೆ ಬರಲಾಗದೆ ತಿಂಗಳು ಕಳೆದಿದೆ. ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದರೂ, ಇಲ್ಲಿನ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ.
ಕಳೆದ ಬಾರಿ ಕಾಂಕ್ರೀಟ್ ರಸ್ತೆ ಕೆಲಸ ನಡೆಸುವಾಗ ರಸ್ತೆ ಎತ್ತರವಾಗಿ ಮಾಡಿದ್ದು, ಮನೆ ತಗ್ಗಿನಲ್ಲಿದೆ. ಮನೆ ಮುಂಭಾಗ ಖಾಲಿ ಜಾಗವಿದ್ದು, ಅದರಲ್ಲಿ ನೀರು ತುಂಬಿದೆ. ಅಲ್ಲಿಂದ ಬರುವ ಒಸರು ಹಾಗೂ ಮಳೆ ನೀರು ಅಶೋಕ್ ಶೆಟ್ಟಿಯವರ ಮನೆಯ ಅಂಗಳ ಹಾಗೂ ಹಿಂದಿನ ಇನ್ನೊಂದು ಮನೆ ಹಾಗೂ ಅಂಗಳದಲ್ಲಿ ನಿಂತಿದೆ. ಕಳೆದ ವರ್ಷದವರೆಗೆ ಹಿಂಭಾಗದ ಮನೆಯ ಎದುರಿನ ತಗ್ಗು ಪ್ರದೇಶದಲ್ಲಿ ನೀರು ಹರಿದು ಹೋಗುತ್ತಿತ್ತು. ಆದರೆ ಬೇಸಿಗೆಯಲ್ಲಿ ಜಾಗದ ಮಾಲೀಕರು ಅಲ್ಲಿಗೆ ಮಣ್ಣು ಹಾಕಿದ್ದು, ಇದರಿಂದ ನೀರು ಹರಿದು ಹೋಗಲು ಜಾಗವಿಲ್ಲದಾಗಿ ಎರಡು ಮನೆಗಳಿಗೆ ನೀರು ನುಗ್ಗಿದೆ.
ಕಳೆದ ವರ್ಷದ ತನಕ ಇಲ್ಲಿ ಆತಂಕ ಪಡಬೇಕಾಗಿರಲಿಲ್ಲ. ಈ ಬಾರಿ ಪರಿಸ್ಥಿತಿ ಬದಲಾಗಿದೆ. ಮನೆ ಜಲಾವೃತಗೊಂಡಿದೆ. ಒಳಗಿರುವ ಟಿ.ವಿ., ರೆಫ್ರಿಜರೇಟರ್ ಇತ್ಯಾದಿ ಕೆಟ್ಟು ಹೋಗಿದ್ದು, ಟೇಬಲ್, ಸೋಫಾ, ಕಾಟ್, ಮನೆಯ ಬಾವಿ ಎಲ್ಲವೂ ಹಾಳಾಗಿ ಲಕ್ಷಾಂತರ ರೂ. ನಷ್ಟವುಂಟಾಗಿದೆ.
ಮನೆ ಮಾಲೀಕರಾದರೂ, ಬಾಡಿಗೆಯವರ ಜತೆಗೇ ದಿನಗಳೆಯುವ ಸ್ಥಿತಿ ಈ ದಂಪತಿಗೆ ಎದುರಾಗಿದೆ. ಮೇಲ್ಮಹಡಿಯಲ್ಲಿ ಬಾಡಿಗೆಯಲ್ಲಿರುವ ತಾಯಿ -ಮಗನ ಜತೆ ಪ್ರಸ್ತುತ ದಿನಗಳೆಯುತ್ತಿದ್ದಾರೆ. ಬಾಡಿಗೆ ಮನೆಯ ವ್ಯಕ್ತಿ ರಿಕ್ಷಾ ಹೊಂದಿದ್ದರೂ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. 25 ಸಾವಿರ ರೂ. ಖರ್ಚು ಮಾಡಿ ಪಂಪ್, ಪೈಪ್ ತರಿಸಿ ನೀರು ತೆಗೆದರೂ ಮತ್ತೆ ಮತ್ತೆ ನೀರು ಸಂಗ್ರಹಗೊಳ್ಳುತ್ತಿದೆ.
9 ವರ್ಷಗಳಿಂದ ಮನೆಯಲ್ಲಿ ವಾಸವಾಗಿದ್ದೇವೆ. ಈವರೆಗೆ ಸಮಸ್ಯೆಯಾಗಿರಲಿಲ್ಲ. ಈ ಬಾರಿ ಮಳೆಗೆ ಮನೆ ನೀರಿನಿಂದ ಆವೃತವಾಗಿದೆ. ಮನೆಯಿಂದ ಹೊರಗೆ ಕಾಲಿಡದೆ ತಿಂಗಳಾಗುತ್ತ ಬಂತು. ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ನೋಡಿ ಹೋಗಿದ್ದಾರೆಯೇ ವಿನಾಃ ಸ್ಪಂದಿಸುವ ಕಾರ್ಯ ಮಾಡಿಲ್ಲ.
ಜಯಂತಿ ಶೆಟ್ಟಿ ಮನೆ ಒಡತಿ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಒಂದೆರಡು ದಿನದಲ್ಲಿ ಕೆಲಸ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಇಂಥ ಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳುವ ಅಗತ್ಯವಿದೆ.
ಡಾ.ವೈ.ಭರತ್ ಶೆಟ್ಟಿ ಶಾಸಕ