ಉಡುಪಿ: ಮೀನಿನ ಆಹಾರ ಖಾದ್ಯಗಳಿಗೆ ಕೃತಕ ಬಣ್ಣ ಹಾಗೂ ರುಚಿ ಬರುವ ರಾಸಾಯನಿಕ ಸೇರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪ್ರವಾಸಿಗರ ದೂರಿನ ಹಿನ್ನೆಲೆಯಲ್ಲಿ ನಗರಸಭಾ ಪೌರಾಯುಕ್ತ ರಾಯಪ್ಪ ನೇತೃತ್ವದಲ್ಲಿ ಅಧಿಕಾರಿಗಳು ಮಲ್ಪೆ ಬೀಚ್ನ ಬಳಿಯ ಹೊಟೇಲ್ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮಲ್ಪೆ ಬೀಚ್ ಸುತ್ತಮುತ್ತಲು ಮೀನಿನ ಪ್ರೈ, ಮಸಾಲ ಪ್ರೈ, ಚಿಕನ್ ಕಬಾಬ್, ಚೈನಿಸ್ ಫುಡ್ಗಳ ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳಿದ್ದು, ಇಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೆಚ್ಚಿನ ಹೊಟೇಲ್ಗಳಲ್ಲಿ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ, ಅತೀಯಾದ ರುಚಿ ಬರುವ ರಾಸಾಯನಿಕ ಬೆರೆಸಿ ತಯಾರು ಮಾಡುತ್ತಾರೆ ಎಂದು ಪ್ರವಾಸಿಗರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ತಕ್ಷಣ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭಾ ಪೌರಾಯುಕ್ತರಿಗೆ ಪರಿಶೀಲಿಸಲು ನಿರ್ದೇಶನ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ನಗರಸಭೆಯ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಹೆಚ್ಚಿನ ಹೊಟೇಲ್ಗಳಲ್ಲಿ ಮಾನವನ ಜೀವಕ್ಕೆ ಹಾನಿಕಾರಕವಾಗುವ ಕೃತಕ ಬಣ್ಣ ಹಾಗೂ ಅಜಿನಮೊಟೊ ಬಳಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಹೊಟೇಲ್ ಮಾಲಕರಿಗೆ ಎಚ್ಚರಿಕೆ ನೀಡಿದ ಪೌರಾಯುಕ್ತರು ಇನ್ನು ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳಿಗೆ ವಿಷಯುಕ್ತ ಬಣ್ಣ, ಟೆಸ್ಟಿ ಪೌಡರ್ ಬಳಕೆ ಮಾಡದಂತೆ ತಿಳಿಸಿದ್ದಾರೆ.