ಅರಕೇರಾ: ಮುಖಕ್ಕೆ ಬಣ್ಣ ಹಚ್ಚಿಕೊಂಡು ರಾಮ-ಹನುಮ ಸೇರಿ ವಿವಿಧ ವೇಷ ಧರಿಸಿ ಬೀದಿ ಬೀದಿಗಳಲ್ಲಿ ನಟನೆ ಮಾಡಿ ಜನರನ್ನು ರಂಜಿಸುತ್ತಿದ್ದ ಹಗಲು ವೇಷಧಾರಿಗಳು ಹಲವು ದಶಕಗಳಿಂದ ಮರೆಯಾಗಿದ್ದರು. ಇದೀಗ ಮತ್ತೆ ವೇಷ ತೊಟ್ಟು ರಾಮಾಯಣ ಕಥೆ ಹೇಳಲು ಬೀದಿಗೆ ಇಳಿದು ಜನರಿಗೆ ಪೌರಾಣಿಕ ಮೌಲ್ಯಗಳನ್ನು ಬಿತ್ತರಿಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದ ಗಾಂಧಿ ವೇಷಧಾರಿಗಳು
ಪಟ್ಟಣದ ಹಗಲು ವೇಷಧಾರಿಗಳು ಪೌರಾಣಿಕ ಕಥಾ ಪ್ರಸಂಗಗಳನ್ನು ಜನರ ಸನಿಹಕ್ಕೆ ಕೊಂಡೊಯ್ಯುತ್ತಿದ್ದಾರೆ. ಆಧುನಿಕ ಯುಗದ ಭರಾಟೆಯಲ್ಲಿ ಟಿವಿ, ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಜಾಲತಾಣದ ಗೀಳನ್ನು ಹಚ್ಚಿಕೊಂಡಿರುವ ಜನರನ್ನು ರಂಜಿಸುವುದು ಕಷ್ಟ ಎನ್ನುವ ನಿಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ ಮುಖಕ್ಕೆ ಬಣ್ಣ ಹಚ್ಚುವುದನ್ನು ಬಿಟ್ಟಿದ್ದರು.
ಹಗಲು ವೇಷಧಾರಿಗಳು ಮೂಲ ವೃತ್ತಿ ಬಿಟ್ಟು ವಿವಿಧ ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಈ ವರ್ಷ ಸುಗ್ಗಿ ಕಾಲದಲ್ಲಿ ಹಗಲು ವೇಷಧಾರಿಗಳು ಬಿರು ಬಿಸಿಲನ್ನು ಲೆಕ್ಕಿಸದೆ ಬೆಳಗ್ಗೆಯಿಂದ ಸಂಜೆವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮುಂದೆ ನಾಟಕ, ಹಾಡು, ನೃತ್ಯ ಮಾಡುವ ಮೂಲಕ ಕಲೆ, ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ.
ಪಟ್ಟಣದ ಹಗಲು ವೇಷಗಾರರು, ರಾಮಾಯಣದ ಹಲವು ಪ್ರಸಂಗಗಳನ್ನು ಜನರ ಎದುರು ಕಣ್ಣಿಗೆ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭೀಮಾಂಜನೇಯ ಯುದ್ಧ, ಸೀತಾಪಹರಣ, ರಾಮ-ಲಕ್ಷ್ಮಣರ ವನವಾಸ, ಲಕ್ಷ್ಮಣ-ಶೂರ್ಪನಕಿಯರ ಸಮರ, ಹೀಗೆ ದಿನಕ್ಕೊಂದು ಕಥಾ ಪ್ರಸಂಗಗಳನ್ನು ಸಾದರಪಡಿಸುವ ಹಗಲು ವೇಷಗಾರರು,
ಕೊನೆಯ ದಿನದಲ್ಲಿ ರಾಮನ ಪಟ್ಟಾಭಿಷೇಕದ ಪ್ರಸಂಗ ಪ್ರದರ್ಶಿಸಿ ತಮ್ಮ ಕಲಾ ಪ್ರದರ್ಶನಕ್ಕೆ ತೆರೆ ಎಳೆಯಲಿದ್ದಾರೆ. ಕಣ್ಣಿಗೆ ಕಟ್ಟುವಂತೆ ಮನೋಜ್ಞವಾಗಿ ಅಭಿನಯಿಸುವ ವೇಷಗಾರ ಕಲಾವಿದರು, ಕೊನೆಯ ದಿನ ಮನೆ ಮನೆಗೆ ಹೋಗಿ ಜನ ನೀಡಿದಷ್ಟು ಹಣ, ದವಸ-ಧಾನ್ಯ ಸ್ವೀಕರಿಸಿ ಕೃತಾರ್ಥತೆ ಮೆರೆಯುತ್ತಾರೆ.
ಹೊಟ್ಟೆ ಪಾಡಿಗೆ ಬೀದಿಗಳಲ್ಲಿ ಹಾಡುತ್ತ, ಕುಣಿಯುತ್ತ ಜನರನ್ನು ರಂಜಿಸುವ ಹಗಲುವೇಷ ಕಲಾವಿರಿಗೆ ಆರ್ಥಿಕ ಪ್ರೋತ್ಸಾಹವಿಲ್ಲದಂತಾಗಿದೆ. ಅವರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಹಗಲು ವೇಷಗಾರರು ಸಶಕ್ತರಾಗಿಲ್ಲ. ಬೆರಳೆಣಿಕೆಯಷ್ಟು ಜನ ಮಾತ್ರ ಕೊಂಚ ಅಭಿವೃದ್ಧಿ ಹೊಂದಿದ್ದಾರೆ. ಅನೇಕರನ್ನು ಮುಖ್ಯವಾಹಿನಿಗೆ ತರಬೇಕಿದೆ. ಹಗಲು ವೇಷಧಾರಿಗಳಾದ ಶಿವಪ್ಪ ರುದ್ರಾಕ್ಷಿ, ಅಂಜಿನಪ್ಪ ರುದ್ರಾಕ್ಷಿ, ನಾಗಪ್ಪ ಕೋಡಿಗಂಟಿ, ಗಂಗಪ್ಪ ರುದ್ರಾಕ್ಷಿ, ಬಸವರಾಜ ರುದ್ರಾಕ್ಷಿ, ಪರಶುರಾಮ ಕುದುರೆಮುಖ, ಜಂಬಣ್ಣ ರುದ್ರಾಕ್ಷಿ, ಗೋವಿಂದಪ್ಪ, ಅಂಬಣ್ಣ ಪೌರಾಣಿಕ ನಾಟಕ, ಹಾಡು, ನೃತ್ಯ ಪ್ರದರ್ಶಿಸುವ ಮೂಲಕ ಕಲೆ ಉಳಿಸಲು ಶ್ರಮಿಸುತ್ತಿದ್ದಾರೆ.
ಮುಖ್ಯವಾಹಿನಿಗೆ ತರಬೇಕಿದೆ ಸರ್ಕಾರ
ಹಗಲು ವೇಷಧಾರಿ, ಅರಕೇರಾರಾಮಣ್ಣ ರುದ್ರಾಕ್ಷಿಆಧುನಿಕ ಭರಾಟೆಯಲ್ಲಿ ಹಗಲು ವೇಷಗಾರರು ತೀವ್ರ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದೇವೆ. ಟಿವಿ, ಮೊಬೈಲ್, ಕಂಪ್ಯೂಟರ್, ಸಮಾಜಿಕ ಜಾಲತಾಣದ ಗೀಳಿನಿಂದ ಹಗಲು ವೇಷಗಾರ ಕಲೆಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಕಲೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ವರ್ಷ ಮುಖಕ್ಕೆ ಬಣ್ಣ ಹಾಕಿ, ವೇಷಧರಿಸಿ ಪೌರಾಣಿಕ ಕಥೆಗಳನ್ನು ಜನರ ಮನಗಳಿಗೆ ತಲುಪಿಸುತ್ತಿದ್ದೇವೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ.