ಮುಧೋಳದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶ್ರಾವಣ ಸಂಭ್ರಮ, ಜಾನಪದ ಸಿರಿ ಶಿಬಿರ -2023ರ ಕಾರ್ಯಾಗಾರವನ್ನು ವಿರಕ್ತಮಠದ ಬಸವಲಿಂಗ ಸ್ವಾಮಿಗಳು ಉದ್ಘಾಟಿಸಿದರು. ಅಂತಾರಾಷ್ಟ್ರೀಯ ಕಲಾವಿದ ಗೋನಾಸ್ವಾಮಿ, ಜ್ಯೋತಿ ಪಾಟೀಲ, ನಿರ್ಮಲಾ ಮಲಘಾಣ ಇತರರಿದ್ದರು. 
ಜಿಲ್ಲೆ

ಕಲೆಗಿದೆ ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ಸಂಗೀತ ಮತ್ತು ನೃತ್ಯದಂತಹ ಕಲೆ ಮಗುವಿನ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಹೆಚ್ಚಿಸುವುದರ ಜೊತೆಗೆ ಅತ್ಯುತ್ತಮ ಆರೋಗ್ಯವನ್ನು ಕೊಡುತ್ತದೆ ಎಂದು ವಿರಕ್ತಮಠ-ಗವಿಮಠದ ಬಸವಲಿಂಗ ಸ್ವಾಮೀಜಿಗಳು ಹೇಳಿದರು.

ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸಪ್ತಸ್ವರ ಸಂಗೀತ, ನೃತ್ಯ, ಸಾಂಸ್ಕೃತಿಕ ಸಂಸ್ಥೆ ಮುಧೋಳ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಶ್ರಾವಣ ಸಂಭ್ರಮ, ಜಾನಪದ ಸಿರಿ ಶಿಬಿರ -2023 ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆ ಜನಪದ ಕಲೆ ಹಾಗೂ ಸಂಸ್ಕೃತಿಯನ್ನು ಸದೃಢಗೊಳಿಸಲು ಯಾಂತ್ರಿಕ ಬದುಕಿನಲ್ಲಿ ಜೀವನ ಸಾಗಿಸುವ ಇಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಮುಂದಿನ ತಲೆಮಾರಿಗಾಗಿ ಕಲೆಯನ್ನು ಕಾಪಿಟ್ಟುಕೊಳ್ಳುವ ಕಾರ್ಯವನ್ನು ಸತತ 15 ವರ್ಷದಿಂದ ಮಾಡುತ್ತ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಿರ್ಮಲಾ ಮಲಘಾಣ ಮಾತನಾಡಿ, ಜನಪದರು ದೇಸಿ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಆಧುನಿಕ ಜಗತ್ತಿನಲ್ಲಿ ದೇಸಿ ಸಂಪ್ರದಾಯಗಳು ಮರೆಯಾಗುತ್ತಿವೆ. ಅವುಗಳ ಉಳಿವಿಗಾಗಿ ನಮ್ಮ ಸಣ್ಣ ಪ್ರಯತ್ನ ಇದಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪಾಟೀಲ ಅಧ್ಯಕ್ಷತೆ ಮಾತನಾಡಿ, ಸಂಸ್ಕೃತಿ, ಸಂಪ್ರದಾಯ ಆಚರಣೆಗಳು ಮುಂದಿನ ತಲೆಮಾರಿಗೆ ಮುಂದುವರಿಯಲು ಅವುಗಳ ಬಗ್ಗೆ ತರಬೇತಿ ಅತ್ಯಗತ್ಯ ಎಂದು ಹೇಳಿದರು.

ಅಂತಾರಾಷ್ಟ್ರೀಯ ಜಾನಪದ ಕಲಾವಿದರ ತಂಡದ ಮುಖ್ಯಸ್ಥ ಗೋನಾಸ್ವಾಮಿ, ನಟಿ ರೋಹಿಣಿ ಹಾಸನ, ಜಾನಪದ ಕಲಾವಿದರಾದ ಶರತ ಬಹುಜನ, ಹಲಗಾಪುರ ರಾಜು ಪಿ.(ಜೂಜೂ), ಕಾವ್ಯಾ ಗೌತಮಿ ಅವರು ಶಿಬಿರದಲ್ಲಿ ಸುಗ್ಗಿ ಕುಣಿತ, ಪೂಜಾಕುಣಿತ, ನವಿಲು ಕುಣಿತ, ಯಕ್ಷಗಾನ, ವೀರಗಾಸೆ, ಕೋಲಾಟ, ಜನಪದ ಹಾಡು-ನೃತ್ಯಗಳ ತರಬೇತಿ ನೀಡುತ್ತಿದ್ದಾರೆ ಎಂದರು.

ಅಧ್ಯಕ್ಷೆ ಜ್ಯೋತಿ ಪಾಟೀಲ, ಪ್ರಧಾನ ಕಾರ್ಯದರ್ಶಿ ನಿರ್ಮಲಾ ಮಲಘಾಣ, ಸುಜಾತಾ ವಸದ, ಶೈಲಾ ಲಿಂಗದ, ಸುನೀತಾ ಪಾಟೀಲ, ಶಿವಲೀಲಾ ಬೆಳಗಲಿ, ಮಾಲಾ ಪಾಟೀಲ, ಶಬಾನಾ ಜಮಾದಾರ, ಡಾ.ಪಾರ್ವತಿ ನಾಯಿಕ, ಡಾ.ವೀಣಾ ಕಕರಡ್ಡಿ, ಭಾರತಿ ಕತ್ತಿ, ವಿಜಯಾ ಹಂಗರಗಿ, ಸಂತೋಷ ಮೆಟಗುಡ್ಡ, ಬಸವರಾಜ ಹೊಸಕೋಟಿ, ಸೋಮು ಹಿರೇಮಠ ಇದ್ದರು.