ಬೆಳಗಾವಿ ಕೆಎಲ್‌ಇ ಸಂಸ್ಥೆಗೆ ಭೇಟಿ ನೀಡಿದ್ದ ನಿತಿನ್ ದೇಸಾಯಿ ಅವರಿಗೆ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ನೆನಪಿನ ಕಾಣಿಕೆ ನೀಡಿದ ದೃಶ್ಯ. ಮಾಜಿ ಶಾಸಕ ಮಹಾಂತೇಶ ದೊಡಗೌಡರ ಇತರರಿದ್ದರು. 
ಜಿಲ್ಲೆ

ಕಲಾ ನಿರ್ದೇಶಕ ನಿತಿನ್ ದೇಸಾಯಿ ನಿಧನಕ್ಕೆ ಡಾ.ಕೋರೆ ಸಂತಾಪ

ಬೆಳಗಾವಿ: ಭಾರತದ ಅಪರೂಪದ ಖ್ಯಾತ ಕಲಾ ನಿರ್ದೇಶಕ, ನಿರ್ಮಾಪಕ, ವಿನ್ಯಾಸಕಾರ, ನಟ ನಿತಿನ್ ಚಂದ್ರಕಾಂತ್ ದೇಸಾಯಿ ಅವರ ಅಕಾಲಿಕ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಕಂಬನಿ ಮಿಡಿದಿದ್ದಾರೆ.

ನಿತಿನ್ ದೇಸಾಯಿ ಅವರು ಒಬ್ಬ ಅದ್ಭುತ ಕಲಾ ನಿರ್ದೇಶಕರಾಗಿದ್ದರು. ಅತ್ಯುತ್ತಮ ಚಲನಚಿತ್ರ ಹಾಗೂ ಧಾರಾವಾಹಿ ನಿರ್ದೇಶಕರಾಗಿ ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದರು. ಲಗಾನ್ ಮತ್ತು ದೇವದಾಸ್‌ನಂತಹ ಶ್ರೇಷ್ಠ ಚಲನಚಿತ್ರಗಳಲ್ಲಿ ಕಲಾ ನಿರ್ದೇಶನದ ಕಾರ್ಯಗಳಿಂದ ಅಚ್ಚಳಿಯದೆ ಜನಮಾನಸದಲ್ಲಿ ಉಳಿದುಕೊಂಡಿದ್ದರು. ತಮ್ಮ ಅಮೂಲ್ಯ ಕಲಾ ಸೇವೆಯಿಂದ ಪ್ರತಿಷ್ಠಿತ ಫ್ಮಿಲ್ಮ್ ಪೇರ್ ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ಅವರ ಕಲಾ ಕಂಪನಿ ಎನ್‌ಡಿ ಆರ್ಟ್ ವರ್ಲ್ಡ್-ಐತಿಹಾಸಿಕ ಸ್ಮಾರಕಗಳ ಪ್ರತಿಕೃತಿಗಳನ್ನು ನಿರ್ವಹಿಸುವ ಮತ್ತು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು ಇತ್ಯಾದಿಗಳಿಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡು ಹೆಸರಾಗಿದ್ದರು.

ಗೋವಾವೇಸ್ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಉದ್ಯಾನದ ವಿನ್ಯಾಸಕ್ಕೂ ನಿತಿನ್ ದೇಸಾಯಿ ಅವರು ಆಗಮಿಸಿ ಮಾರ್ಗದರ್ಶನ ಮಾಡಿದ್ದರು. ಕಿತ್ತೂರು ಕೋಟೆಗೆ ಭೇಟಿ ನೀಡಿದ್ದ ಅವರು ಕೋಟೆಯ ನೂತನ ವಿನ್ಯಾಸಕ್ಕೂ ಮುಂದಾಗಿದ್ದರು. ಅವರು ಮಹಾರಾಷ್ಟ್ರದಲ್ಲಿರುವ ಕರ್ಜತ್‌ನಲ್ಲಿರುವ ಆರ್ಟ್ ಕಲಾವಿನ್ಯಾಸಕ್ಕೂ ನಾನು ಹೋಗಿ ಭೇಟಿ ನೀಡಿದ್ದೆ. ಬಹಳ ಅದ್ಭುತವಾಗಿ ಆ ಕಲಾ ಗ್ಯಾಲರಿಯನ್ನು ನಿರ್ಮಿಸಿದ್ದಾರೆ. ಅವರ ಕಲಾಪ್ರಪಂಚವನ್ನು ಯಾರೇ ನೋಡಿದರೂ ರೋಮಾಂಚನಗೊಳ್ಳುತ್ತಿದ್ದರು. ಅವರೊಳಗೊಬ್ಬ ವಿಸ್ಮಯ ಕಲಾವಿದನೊಬ್ಬ ಮನೆಮಾಡಿಕೊಂಡಿದ್ದ ಅದರಲ್ಲಿ ಎರಡು ಮಾತಿಲ್ಲ. ಈಚೆಗೆ ಅವರು ಕೆಎಲ್‌ಇ ಸಂಸ್ಥೆಗೆ ಭೇಟಿ ನೀಡಿದ್ದರು. ಸ್ನೇಹಜೀವಿಯಾಗಿದ್ದ ಅವರೊಂದಿಗೆ ನಿಕಟವಾದ ಒಡನಾಟವಿತ್ತು. ಶ್ರೇಷ್ಠ ಅಪ್ರತಿಮ ಕಲಾವಿದನನ್ನು ಕಳೆದುಕೊಂಡು ಭಾರತ ಕಲಾಕ್ಷೇತ್ರ ಬಡವಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಡಾ.ಕೋರೆ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.