ವಿಜಯಪುರ: ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಚಿಗುರು ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.
ಮಂಗಳವಾರ ಜಲನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ಅತ್ಯವಶ್ಯಕ ಎಂದರು.
ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರಟಗಿ ಮಾತನಾಡಿ, ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಔಚಿತ್ಯಪೂರ್ಣವಾಗಿದೆ. ಹಿಂದೆ ಶಿಕ್ಷಣ ಇಲಾಖೆಯಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಚಿಗುರು’ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ ಎಂದರು.
ಕುಮಾರ ನಾಯ್ಕೋಡಿ ಇವರಿಂದ ಕೊಳಲು ವಾದನ, ಭೂಮಿಕಾ ಅಡಕಿ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಹಿಟ್ನಳ್ಳಿಯ ಸಮರ್ಥ ಸಂಕೋಂಡ ಇವರಿಂದ ಸಂಗೊಳ್ಳಿ ರಾಯಣ್ಣ ಏಕಪಾತ್ರಾಭಿನಯ, ಅನುಷ್ಕಾ ಬಿರಾದಾರ ಇವರಿಂದ ಜಾನಪದ ಗೀತೆಗಳು, ಶ್ರಾವಣಿ ಪಿ.ಪಾಟೀಲ ಇವರಿಂದ ವಚನ ಸಂಗೀತ, ಬಾಗೇಶ ಮತ್ತು ಸಂಗಡಿಗರಿಂದ ಐತಿಹಾಸಿಕ ನಾಟಕ ಕಿತ್ತೂರ ಚನ್ನಮ್ಮ ಪ್ರದರ್ಶನಗೊಂಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎ.ಆರ್. ದಶವಂತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯ ಪರಿವೀಕ್ಷಕ ಸಿ.ಎಚ್. ಬಿರಾದಾರ, ಕೊಳಲು ವಾದಕ ಬಾಬುಜಿ ನಾಯಿಕೋಡಿ, ರಂಗಭೂಮಿ ಕಲಾವಿದ ಡಿ.ಎಚ್. ಕೋಲಾರ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಜಗದೇವ ಗಲಗಲಿ ಉಪಸ್ಥಿತರಿದ್ದರು.