ಗೋಣಿಕೊಪ್ಪ: ಕಲೆಯು ಚಿತ್ರಕಲಾವಿದನ ಸ್ಮತಿಪಟಲದಿಂದ ಐಕ್ಯವಾದ ವಸ್ತುಸ್ಥಿತಿಯನ್ನು ಚಿತ್ರಪರದೆಯ ಮೂಲಕ ಸಾದರಪಡಿಸುವಂಥದ್ದು. ಸಮಾಜದ ಆಗುಹೋಗುಗಳನ್ನು ಚಿತ್ರಗಳ ಮೂಲಕ ಬಹಿರಂಗಪಡಿಸುವುದಾಗಿದೆ ಎಂದು ತಹಸೀಲ್ದಾರ್ ಎಚ್.ಎನ್.ರಾಮಚಂದ್ರ ಹೇಳಿದರು.
ಸಾಧೀಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ ಮತ್ತು ಕೇರಳ ಚಿತ್ರಕಲಾ ಪರಿಷತ್ ಕಣ್ಣೂರು ಜಿಲ್ಲೆ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆ ತಾಲೂಕಿನಲ್ಲಿ ಹೆಗ್ಗಳ ಎಡಮಕ್ಕಿ ಗ್ರಾಮದ ಹೋಂ ಸ್ಟೇಯಲ್ಲಿ ಕಲಾ ಉತ್ಸವ ಕೊಡಗು ಅಂಗವಾಗಿ ಆಯೋಜಿಸಿದ್ದ ಅಂತಾರಾಜ್ಯ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಲೆಗೆ ವಯಸ್ಸು, ಹೆಣ್ಣು-ಗಂಡು ಎಂಬುದು ಗಣನೆಗೆ ಬರುವುದಿಲ್ಲ. ವ್ಯಕ್ತಿಯು ಅಂತರ್ಗತವಾಗಿ ಹುದಿಗಿರುವ ವಸ್ತುಸ್ಥಿತಿಯನ್ನು ಚಿತ್ರಪರದೆಯ ಮೇಲೆ ರೇಖೆಗಳನ್ನು ಜೋಡಿಸಿ ಬಣ್ಣದ ಲೇಪನ ಮಾಡಿ ಬಹಿರಂಗಪಡಿಸುತ್ತಾನೆ. ಕಲೆಯನ್ನು ಆಸ್ವಾಧಿಸುವ ಪ್ರತಿಯೊಬ್ಬರೂ ಕಲಾವಿದರನ್ನು ಗೌರವಿಸುವಂತಾಗಬೇಕು. ಚಿತ್ರಕಲೆ ನಿಂತ ನೀರಾಗಬಾರದು. ಪೋಷಣೆ ಮಾಡಿ ಪರರಿಗೆ ಉತ್ತೇಜಿಸುವಂತೆ ಪ್ರಚಾರವಾಗಬೇಕು ಎಂದು ಹೇಳಿದರು.
ವಿರಾಜಪೇಟೆ ಪುರಸಭೆ ಸದಸ್ಯ ಮೊಹಮ್ಮದ್ ರಾಫಿ ಮಾತನಾಡಿ, ಸ್ಥಳೀಯ ಚಿತ್ರಕಲಾವಿದರಾದ ಸಾಧೀಕ್ ಹಂಸ ಅವರು ಸತತ ಏಳು ವರ್ಷಗಳಿಂದ ಕಲಾ ಉತ್ಸವ ಕೊಡಗು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟವು ಕಂಪ್ಯೂಟರ್ ಯುಗವಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಬಿಂಬಿಸುವ ಚಿತ್ರಗಳು ಎಲ್ಲ ಸ್ತರಗಳಲ್ಲೂ ರಾರಾಜಿಸುತ್ತಿವೆ. ಕಲರ್ ಪ್ರಿಂಟ್, ಫ್ಲೆಕ್ಸ್ ಮುಂತಾದವುಗಳು ನೈಜ ಚಿತ್ರಕಲೆಗಾರರನ್ನು ಅಂಚಿಗೆ ದೂಡಿವೆ. ಪಾರಂಪರಿಕವಾಗಿ ಅರಳಿದ ನೈಜ ಕಲೆಯು ಶಾಶ್ವತವಾದುದು ಎಂದು ಅಭಿಪ್ರಾಯಪಟ್ಟರು.
ಕೇರಳ ಚಿತ್ರಕಲಾ ಪರಿಷತ್‌ನ ಕಣ್ಣೂರು ಜಿಲ್ಲಾ ಘಟಕದ ಅಧ್ಯಕ್ಷ ಕರ್ನಲ್ ಸುರೇಶ್ ಮಾತನಾಡಿ, ಕೇರಳ ರಾಜ್ಯ ಲಲಿತ ಕಲಾ ಆಕಾಡೆಮಿ ಸ್ಥಾಪನೆಯಾಗುವ ಮೊದಲೇ ಚಿತ್ರಕಲಾ ಪರಿಷತ್ 1957ರಲ್ಲಿ ಸ್ಥಾಪನೆಯಾಗಿದೆ. 4000ಕ್ಕಿಂತ ಅಧಿಕ ಚಿತ್ರಕಲೆಗಾರರು ಸದಸ್ಯರಾಗಿದ್ದಾರೆ. ಕೊಡಗು ಜಿಲ್ಲೆ ಪ್ರಕೃತಿದತ್ತವಾಗಿದ್ದು, ಚಿತ್ರಕಲೆಗಾರರಿಗೆ ಪೂರಕ ವಾತಾವರಣವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಕಲಾ ಶಿಬಿರದ ಸಂಚಾಲಕ ಮತ್ತು ಸಾಧಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ ಮಾಲೀಕ ಸಾಧೀಕ್ ಹಂಸ ಮಾತನಾಡಿದರು. ಶಿಬಿರದಲ್ಲಿ ಒಟ್ಟು 30 ಮಂದಿ ಚಿತ್ರ ಕಲಾವಿದರು ಭಾಗವಹಿಸಿದ್ದರು.