ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಆಸಕ್ತಿಯಿಲ್ಲದಿದ್ದರೆ ಸಮಾಜದ ಸ್ವಾಸ್ಥೃ ಬಿಗಡಾಯಿಸುವುದು. ಯಕ್ಷ ಭಾರತಿಯಂತಹ ಸಂಘಟನೆಯಿಂದ ಸ್ವಸ್ಥ ಸಮಾಜ ಸಾಧ್ಯ. ಸಮಾಜದ ಪ್ರೋತ್ಸಾಹದಿಂದ ಗ್ರಾಮಾಂತರ ಪ್ರದೇಶದಲ್ಲಿ ಯಕ್ಷಭಾರತಿ ನಿರಂತರ ಯಕ್ಷಗಾನ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಆಶ್ರಯದಲ್ಲಿ ಬೆಳ್ತಂಗಡಿ ಯಕ್ಷಭಾರತಿ ದಶಮಾನೋತ್ಸವ-ಭಾರತ ಮಾತಾ ಪೂಜನ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆಗೈದು, ದಶಮಾನೋತ್ಸವ ಸ್ಮರಣ ಸಂಚಿಕೆ ದಶಪರ್ವವನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಖ್ಯಾತ ವಾಗ್ಮಿ ಪ್ರಕಾಶ್ ಮಲ್ಪೆ ಮಾತನಾಡಿದರು. ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ದೊಂಡೋಲೆ ಕಮಲಾ ಸೂರ್ಯನಾರಾಯಣ ರಾವ್ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪುರಂದರ ರಾವ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಸುವರ್ಣ, ಧರ್ಮಸ್ಥಳ ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಶುಭಹಾರೈಸಿದರು. ಶಿವಪ್ರಸಾದ್ ಸುರ್ಯ ನಿರ್ದೇಶನದ ಕಾರ್ಯಕ್ರಮದಲ್ಲಿ ಶ್ರೀನಿವಾಸ ರಾವ್ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಯಕ್ಷ ಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ದಶಪರ್ವ ಕುರಿತು ಮಾತನಾಡಿದರು. ಭವ್ಯ ಹೊಳ್ಳ, ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿದರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು. ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಂದಿಸಿದರು. ಯಕ್ಷಭಾರತಿ ಸಂಚಾಲಕ ಮಹೇಶ್ ಕನ್ಯಾಡಿ, ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಕೋಶಾಧಿಕಾರಿ ಕುಸುಮಾಕರ ಕೊತ್ತೋಡಿ ಸಹಕರಿಸಿದರು. ಯಕ್ಷಭಾರತಿ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ವಿದ್ಯಾರ್ಥಿಗಳಿಂದ ಚಂದ್ರಶೇಖರ ಧರ್ಮಸ್ಥಳ ನಿರ್ದೇಶನದಲ್ಲಿ ಶ್ರೀ ರಾಮಾಭಿಯಾನ, ಸಬ್ಬಣಕೋಡಿ ರಾಮ ಭಟ್ ಶಿಷ್ಯರಿಂದ ವೀರ ಬಬ್ರುವಾಹನ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ದೇವ ದರ್ಶನ(ಜಾಂಬವತಿ ಕಲ್ಯಾಣ) ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ರಾಮ ಭಟ್‌ಗೆ ಪ್ರಶಸ್ತಿ ಪ್ರದಾನ
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಅಧ್ಯಕ್ಷ ಸಬ್ಬಣಕೋಡಿ ರಾಮ ಭಟ್‌ಗೆ ಯಕ್ಷಭಾರತಿ ಪ್ರಶಸ್ತಿ ಪ್ರದಾನಿಸಲಾಯಿತು. ಎಕ್ಸೆಲ್ ಪ.ಪೂ. ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್‌ಗೆ ದಶಮಾನೋತ್ಸವ ಯುವ ಸಾಧಕ ಪುರಸ್ಕಾರ, ಧರ್ಮಸ್ಥಳ ಎಸ್‌ಕೆಡಿಆರ್‌ಡಿಪಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಪರವಾಗಿ ವಿವೇಕ್ ವಿನ್ಸೆಂಟ್ ಪಾಯಸ್‌ಗೆ ದಶಮಾನೋತ್ಸವ ಸೇವಾ ತಂಡ ಗೌರವ, ನಿವೃತ್ತ ಆರೋಗ್ಯ ಸಹಾಯಕಿಯರಾದ ಭುವನೇಶ್ವರಿ ಕುಂಟಿನಿ, ದೇವಮ್ಮಗೆ ಯಕ್ಷಭಾರತಿ ಸೇವಾ ಗೌರವ ಪುರಸ್ಕಾರ ನೀಡಲಾಯಿತು.