ಜಿಲ್ಲೆ

ಕೊಲೆ ಆರೋಪಿ ಬಂಧನ

Gadag

ಗದಗ: ಮುಂಡರಗಿ ತಾಲೂಕು ಗಂಗಾಪೂರ ಸಕ್ಕರೆ ಕಾರ್ಖಾನೆಯ ಸೆಕ್ಯುರಿಟಿ ಗಾರ್ಡ್ ಫಕೀರಪ್ಪ ದೇವೇಂದ್ರಪ್ಪ ತಳವಾರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮುಂಡರಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್, ‘ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಶೀರನಹಳ್ಳಿ ಗ್ರಾಮದ ರಂಗಪ್ಪ (ರಂಗಸ್ವಾಮಿ) ಲಕ್ಷ್ಮಪ್ಪ ಪೂಜಾರ ಎಂಬಾತ ಫಕೀರಪ್ಪನನ್ನು ಕೊಲೆ ಮಾಡಿದ್ದಾನೆ. ಫಕೀರಪ್ಪ ತಳವಾರ ಮತ್ತು ಆರೋಪಿ ರಂಗಪ್ಪ ಸಂಬಂಧಿಗಳಾಗಿದ್ದು, ವರಸೆಯಲ್ಲಿ ಮೃತನಿಗೆ ರಂಗಪ್ಪ ಚಿಕ್ಕಪ್ಪನಾಗಬೇಕು’ ಎಂದು ವಿವರಿಸಿದರು.

ಕಾರ್ಖಾನೆಯಲ್ಲಿ ಮಲಗಿದ್ದ ಸಮಯದಲ್ಲಿ ನ. 13ರಂದು ಫಕೀರಪ್ಪನ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಕುರಿತು ತನಿಖಾ ತಂಡ ರಚಿಸಿ ಶೋಧ ಆರಂಭಿಸಲಾಗಿತ್ತು. ನ. 27ರಂದು ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಮುಂಡರಗಿ ಸಿಪಿಐ ಸುಧೀರಕುಮಾರ ಬೆಂಕಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜೆ.ಐ.ಬಚ್ಚೇರಿ, ನೀಲಕಂಠ ಭಂಗಿ, ಕೋಟೇಶ ಒಡೆಯರ, ಜಿ.ಎನ್. ಮಜ್ಜಗಿ, ಮಂಜು ಮಾದರ, ಶರಣಪ್ಪ ನಾಗೇಂದ್ರಗಡ, ಗುರುರಾಜ ಬೂದಿಹಾಳ, ಆನಂದಸಿಂಗ ದೊಡ್ಡಮನಿ ತನಿಖೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದರು.

ತಂಡದಲ್ಲಿದ್ದ ಸಿಬ್ಬಂದಿಗೆ ಎಸ್ಪಿ ಯತೀಶ ಅವರು ಪ್ರಮಾಣಪತ್ರ ನೀಡಿದರು. ಸಿಪಿಐ ಸುಧೀರಕುಮಾರ ಬೆಂಕಿ ಇತರರು ಇದ್ದರು.

ಬೈಕ್ ಸವಾರ ಸಾವು

ಮುಂಡರಗಿ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕಲಕೇರಿ ರಸ್ತೆಯ ಬೂದಿಹಾಳ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಕಲಕೇರಿ ಗ್ರಾಮದ ರಾಮಚಂದ್ರ ನಾಗಪ್ಪ ಕಮ್ಮಾರ (36) ಮೃತಪಟ್ಟ ಸವಾರ. ಮುಂಡರಗಿಯಿಂದ ಕಲಕೇರಿ ಗ್ರಾಮಕ್ಕೆ ತೆರಳುವಾಗ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಕಳವು

ಗದಗ: ನಗರದ ಹುಬ್ಬಳ್ಳಿ ರಸ್ತೆ ಗಣೇಶ ಕಾಲನಿಯಲ್ಲಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಎಂಬುವವರ ಮನೆಯಲ್ಲಿ ನಗದು, ಚಿನ್ನಾಭರಣ ಕಳವಾದ ಘಟನೆ ಗುರುವಾರ ರಾತ್ರಿ ನಡೆದಿದೆ. ಮನೆಯ ಕಪಾಟಿನಲ್ಲಿದ್ದ 1,77,000 ರೂ. ನಗದು, 2.37 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವಾಗಿವೆ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಮನೆಗೆ ಕೀಲಿ ಹಾಕಿ ಮದುವೆ ಕಾರ್ಯದ ನಿಮಿತ್ತ ಕೊಪ್ಪಳಕ್ಕೆ ತೆರಳಿದಾಗ ಕಳವಾಗಿದೆ ಎಂದು ಶಹರ ಠಾಣೆ ಸಿಪಿಐ ಪಿ.ಎ. ಸಾಲಿಮಠ ತಿಳಿಸಿದ್ದಾರೆ. ಗದಗ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಚ್ಚಿ ಸಾವು

ಮುಳಗುಂದ: ಹೊಲದಲ್ಲಿ ಗೋವಿನಜೋಳ ಕಟಾವು ಮಾಡಲು ಹೋದಾಗ ಹಾವು ಕಚ್ಚಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಪಟ್ಟಣದ ಹಳೇಹುಡಾ ಓಣಿಯ ಬಸವರಾಜ ಫಕೀರಪ್ಪ ಕೊಲ್ಲಾರಿ (38) ಮೃತಪಟ್ಟ ವ್ಯಕ್ತಿ. ಬಸವರಾಜ ಹೊಲದಲ್ಲಿ ಗೋವಿನಜೋಳದ ಕಟಾವು ಮಾಡುತ್ತಿದ್ದಾಗ ವಿಷಕಾರಕ ಹುಳು ಕಚ್ಚಿದೆ ಎಂದು ಗೊತ್ತಾಗಿ ತಕ್ಷಣವೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮುಳಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.