ಜಿಲ್ಲೆ

ಜಾಮೀನು ಪಡೆದು ಹೊರಗೆ ಬರುತ್ತಿದ್ದಂತೆ ಮತ್ತೆ ವಶಕ್ಕೆ!

ಉತ್ತರ ಕನ್ನಡ ಡೆಸ್ಕ್

ಮುಂಡಗೋಡ: ತಾಲೂಕಿನ ಗುಂಜಾವತಿ ಅರಣ್ಯದಲ್ಲಿ ಸಾಗವಾನಿ ಸಾಗಾಟ ಯತ್ನ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡುತ್ತಿದ್ದಂತೆ ಇತ್ತ ಕಾತೂರ ವಲಯ ಅರಣ್ಯ ಅಧಿಕಾರಿಗಳು ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋದ ಘಟನೆ ಸೋಮವಾರ ಜರುಗಿತು.

ತಾಲೂಕಿನ ಗುಂಜಾವತಿ ಅರಣ್ಯದಿಂದ ಸಾಗವಾನಿ ಕಡಿದು ಸಾಗಾಟಕ್ಕೆ ಯತ್ನ ನಡೆಸಿದ್ದ ಶಿಕಾರಿಪುರದ ತಾಲೂಕಿನ ಇನಾಮಮುತ್ತಳ್ಳಿ ಗ್ರಾಮದ ಕರಿಯಪ್ಪ ಹುಬ್ಬಳ್ಳಿ ಹಾಗೂ ಏಕಾಂತ ಹುಲ್ಲತ್ತಿ ಎಂಬುವರನ್ನು ಭಾನುವಾರ ಅರಣ್ಯ ಇಲಾಖೆಯವರು ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರಪಡಿಸಿದ್ದರು.

ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡುತ್ತಿದ್ದಂತೆ ಕಾತೂರು ಅರಣ್ಯಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲೂ ಮರಗಳ್ಳತನದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಇಬ್ಬರನ್ನು ನ್ಯಾಯಾಲಯದ ಹೊರಗಡೆ ವಶಕ್ಕೆ ಪಡೆದು ವಿಚಾರಣೆಗಾಗಿ ಕಾತೂರ ವಲಯಕ್ಕೆ ಕರೆದೊಯ್ದಿದ್ದಾರೆ.

ಅರಣ್ಯ ಇಲಾಖೆ ಮಾಹಿತಿಯಂತೆ ಕಾತೂರ ವಲಯದಲ್ಲಿ ಮರಗಳ್ಳತನ ಮಾಡಿರುವುದು ಇದೇ ಆರೋಪಿಗಳು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ತಾಲೂಕಿನ ವಿವಿಧೆಡೆ ಮರಗಳ್ಳತನದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಗುಂಜಾವತಿ ಅರಣ್ಯದಲ್ಲಿ ಮರಗಳ್ಳತನ ಯತ್ನ ನಡೆಸಿದ್ದ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.